ಜಿಲ್ಲಾ ಸಹಕಾರ ಯೂನಿಯನ್‌ 57ನೇ ವಾರ್ಷಿಕ ಮಹಾಸಭೆ

| Published : Sep 18 2024, 01:53 AM IST

ಜಿಲ್ಲಾ ಸಹಕಾರ ಯೂನಿಯನ್‌ 57ನೇ ವಾರ್ಷಿಕ ಮಹಾಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲಾ ಸಹಕಾರ ಯೂನಿಯನ್ 2023-24 ನೇ ಸಾಲಿನ ಹಾಗೂ 57 ನೇ ವಾರ್ಷಿಕ ಮಹಾಸಭೆ ಮಂಗಳವಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ಯೂನಿಯನ್ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಸಹಕಾರ ಯೂನಿಯನ್ 2023-24 ನೇ ಸಾಲಿನ ಹಾಗೂ 57 ನೇ ವಾರ್ಷಿಕ ಮಹಾಸಭೆ ಮಂಗಳವಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ಯೂನಿಯನ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಮನು ಮುತ್ತಪ್ಪ, ಶಿಕ್ಷಣ, ತರಬೇತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುತ್ತಿರುವ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವಿಶೇಷವಾಗಿ ಅಬಲ ವರ್ಗದ ಸಹಕಾರ ಸಂಘ ಅಂದರೆ ಪರಿಶಿಷ್ಟ ಜಾತಿ/ವರ್ಗ, ಮಹಿಳೆಯರಿಗೆ ತಪ್ಪದೆ ಶಿಕ್ಷಣ ಕಾರ್ಯಕ್ರಮ ಆಯೋಜಿಸುತ್ತಿದೆ. ಸಹಕಾರ ಕ್ಷೇತ್ರಕ್ಕೆ ಆಯ್ಕೆಯಾದ ನಿರ್ದೇಶಕರು ಶಿಕ್ಷಣ, ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಬಂಧಿಸಿದ ಜ್ಞಾನ ಪಡೆಯುವುದಷ್ಟೇ ಅಲ್ಲದೆ ಅರಿತ ವಿಚಾರ ಕಾರ್ಯಗತಗೊಳಿಸಬೇಕು. ಹಾಗಿದ್ದಲ್ಲಿ ಸಂಸ್ಥೆಯು ಉತ್ತಮ ಹಿಡಿತದೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದರು.

ಮಹಾಸಭೆಗೆ ಹಾಜರಾಗದೆ ಕೇವಲ ಊಟದ ಭತ್ಯೆಗಾಗಿ ಮಾತ್ರ ತೆರಳುವುದರಿಂದ ಸಂಘಗಳು ಶೋಚನೀಯ ಪರಿಸ್ಥಿತಿಗೆ ತಲುಪುತ್ತಿವೆ. ಅಂತೆಯೇ ಸಂಘಗಳಿಗೆ ನಮ್ಮ ಪರಿಣಾಮಕಾರಿ ಕೊಡುಗೆ ನೀಡಬೇಕು. ಸಹಕಾರ ಕ್ಷೇತ್ರದಿಂದ ಮಾತ್ರವೇ ಆರ್ಥಿಕ ಅಭಿವೃದ್ದಿ ಮತ್ತು ಪ್ರಪಂಚದ 3ನೇ ಆರ್ಥಿಕ ಶಕ್ತಿಯಾಗಲು ಸಹಕಾರ ಕ್ಷೇತ್ರದಿಂದಲೇ ಸಾಧ್ಯವೆಂದು ನಮ್ಮ ದೇಶದ ಪ್ರಧಾನಮಂತ್ರಿಗಳು ಮನಗಂಡು ಇತ್ತೀಚೆಗೆ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ಹಲವಾರು ಯೋಜನೆಗಳಿಗೆ ಕಾರ್ಯಗತಗೊಳಿಸುವ ಹೆಜ್ಜೆ ಇಟ್ಟಿದ್ದಾರೆ ಎಂದರು.

ಮಹಾಸಭೆಯಲ್ಲಿ ಯೂನಿಯನ್ ದತ್ತಿನಿಧಿ ಹೆಚ್ಚಿಸುವ ಕುರಿತು, ದವಸ ಭಂಡಾರಗಳ ಅಭಿವೃದ್ಧಿ, ಪುನಶ್ಚೇತನ, ಸಹಕಾರ ಇಲಾಖೆಯಲ್ಲಿ ಲೆಕ್ಕಪರಿಶೋಧನಾ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ, ಬೆಳೆ ನಷ್ಟ, ಜಿಲ್ಲೆಯ ರಸ್ತೆಗಳು ಹಾಳಾಗಿರುವ ಕುರಿತು ಚರ್ಚಿಸಿ ಮನವಿ ಸಲ್ಲಿಸುವಂತೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಯೂನಿಯನ್ ನಿರ್ದೇಶಕ ಕೆ.ಎಂ. ತಮ್ಮಯ್ಯ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ವಂದಿಸಿದರು. ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ. ರಮೇಶ್ ಚಂಗಪ್ಪ, ಎನ್. ಎ ರವಿ ಬಸಪ್ಪ, ಸಿ.ಎಸ್. ಕೃಷ್ಣ ಗಣಪತಿ, ಪಿ.ವಿ. ಭರತ್, ಎನ್.ಎ. ಉಮೇಶ್ ಉತ್ತಪ್ಪ, ಪಿ.ಸಿ. ಅಚ್ಚಯ್ಯ, ಪಿ.ಬಿ. ಯತೀಶ್, ವಿ.ಕೆ. ಅಜಯ್ ಕುಮಾರ್, ಎ.ಎಸ್. ಶ್ಯಾಮ್‌ಚಂದ್ರ, ಎನ್.ಎ. ಮಾದಯ್ಯ, ಎಚ್.ಎಂ. ರಮೇಶ್ ಉಪಸ್ಥಿತರಿದ್ದರು. ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿದರು.