ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ‘ಬಿಜಿಎಸ್ ಆಡಳಿತ ಸೇವಾ ರತ್ನ’ ಪ್ರಶಸ್ತಿ ಪ್ರದಾನ

| Published : Jan 19 2025, 02:16 AM IST

ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ‘ಬಿಜಿಎಸ್ ಆಡಳಿತ ಸೇವಾ ರತ್ನ’ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ, ಅನ್ನದಾಸೋಹ ಮತ್ತು ಆರೋಗ್ಯ ಕ್ಷೇತ್ರಕ್ಕೆ ಡಾ. ಬಾಲಗಂಗಾಧರನಾಥ ಶ್ರೀಗಳ ಕೊಡುಗೆ ಅಪಾರವಾಗಿದೆ. ಅವರ ಹೆಸರಿನಲ್ಲಿ ನನಗೆ ನೀಡಿರುವ ಬಿಜಿಎಸ್ ಆಡಳಿತ ಸೇವಾ ರತ್ನ ಪ್ರಶಸ್ತಿ ಸಾರ್ವಜನಿಕ ಕ್ಷೇತ್ರಕ್ಕೆ ನನ್ನ ಸೇವೆ ಹೊಣೆಗಾರಿಕೆ ಹೆಚ್ಚು ಮಾಡಿದೆ. ಈ ಪ್ರಶಸ್ತಿಯನ್ನು ನನಗೆ ಜನ್ಮ ನೀಡಿದ ತಂದೆ ತಾಯಿಗಳಿಗೆ ಅರ್ಪಣೆ ಮಾಡುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮಿಜಿ ಅವರ 80ನೇ ಜಯಂತೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಬಿಜಿಎಸ್ ಆಡಳಿತ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಪಟ್ಟಣದ ಶಿವಪುರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಚುಂಚಶ್ರೀ ಗೆಳೆಯರ ಬಳಗ ಹಾಗೂ ಶ್ರೀ ನಾಡಪ್ರಭು ಒಕ್ಕಲಿಗರ ಸಂಘದ ಸಹಯೋಗದಲ್ಲಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದ ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಕುಮಾರ್, ಅಕ್ಷರ, ಅನ್ನದಾಸೋಹ ಮತ್ತು ಆರೋಗ್ಯ ಕ್ಷೇತ್ರಕ್ಕೆ ಡಾ. ಬಾಲಗಂಗಾಧರನಾಥ ಶ್ರೀಗಳ ಕೊಡುಗೆ ಅಪಾರವಾಗಿದೆ. ಅವರ ಹೆಸರಿನಲ್ಲಿ ನನಗೆ ನೀಡಿರುವ ಬಿಜಿಎಸ್ ಆಡಳಿತ ಸೇವಾ ರತ್ನ ಪ್ರಶಸ್ತಿ ಸಾರ್ವಜನಿಕ ಕ್ಷೇತ್ರಕ್ಕೆ ನನ್ನ ಸೇವೆ ಹೊಣೆಗಾರಿಕೆ ಹೆಚ್ಚು ಮಾಡಿದೆ. ಈ ಪ್ರಶಸ್ತಿಯನ್ನು ನನಗೆ ಜನ್ಮ ನೀಡಿದ ತಂದೆ ತಾಯಿಗಳಿಗೆ ಅರ್ಪಣೆ ಮಾಡುತ್ತಿದ್ದೇನೆ ಎಂದರು.

ಶಾಸಕ ಕೆ.ಎಂ.ಉದಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಸಕ ಸ್ಥಾನದ ಅವಧಿಯಲ್ಲಿ ಮದ್ದೂರು ಪಟ್ಟಣದ ಆಯ್ದ ವೃತ್ತಗಳಿಗೆ ಶ್ರೀಬಾಲಗಂಗಾಧನಾಥ ಶ್ರೀಗಳು, ಅಮರಶಿಲ್ಪಿ ಜಕಣಾಚಾರಿ ಸೇರಿದಂತೆ ಮಹಾನ್ ಚೇತನಗಳ ಹೆಸರಿನ ಜೊತೆಗೆ ಪುತ್ಥಳಿ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಹಿಂದಿನ ಶಾಸಕರ ಅವಧಿಯಲ್ಲಿ ಪುರಸಭೆ ಮುಂಭಾಗ ನಿರ್ಮಾಣ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕಾಟಾಚಾರದಿಂದ ನಿರ್ಮಿಸಲಾಗಿದೆ. ಇದನ್ನು ಮತ್ತೊಮ್ಮೆ ದುರಸ್ತಿ ಮಾಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಇತಿಹಾಸ ಸಂಶೋಧಕ ತೈಲೂರು ವೆಂಕಟ ಕೃಷ್ಣ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಅಭಿನಂದನಾ ಭಾಷಣ ಮಾಡಿದರು. ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ, ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳಿರಯ್ಯ, ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ, ಗೆಳೆಯರ ಬಳಗದ ಗೌರವಾಧ್ಯಕ್ಷ ಅನಂತೇಗೌಡ, ವಿ.ಟಿ.ರವಿಕುಮಾರ್, ಉಪಾಧ್ಯಕ್ಷ ಸಿ.ಎಸ್.ಶಂಕರಯ್ಯ, ಸಿ.ಕೆ.ರಾಮಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ವರಲಕ್ಷ್ಮಿ ಶಿವರಾಮಯ್ಯ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ತಿಪ್ಪೂರು ರಾಜೇಶ್ ಮತ್ತಿತರರು ಇದ್ದರು.

ಶ್ರೀ ಬಾಲಗಂಗಾಧರನಾಥ ಶ್ರೀಗಳು ಆಧುನಿಕ ಸಂತ: ನಿಶ್ಚಲಾನಂದ ಶ್ರೀಗಳು

ಮದ್ದೂರು:

ಧಾರ್ಮಿಕ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಶ್ರೀಬಾಲಗಂಗಾಧರನಾಥ ಶ್ರೀಗಳು ಆಧುನಿಕ ಸಂತ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದ ಶ್ರೀಗಳು ಶನಿವಾರ ಬಣ್ಣಿಸಿದರು. ಪಟ್ಟಣದ ಪೂರ್ಣ ಪ್ರಜ್ಞ ವಿದ್ಯಾ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಭವಿಷ್ಯದಲ್ಲಿ ಮಕ್ಕಳ ಆಸ್ತಿಯಾಗಬೇಕು. ದೇಶಕ್ಕೆ ಅನ್ನ ಕೊಡುವ ರೈತನ ಜೀವನ ಹಸನಾಗಬೇಕು. ಆಗ ಮಾತ್ರ ದೇಶ ಸಮೃದ್ಧಿಯಾಗುತ್ತದೆ. ಸಾರ್ವಜನಿಕ ಜೀವನದಲ್ಲಿದ್ದ ನಾನು ಈಗ ಸನ್ಯಾಸಿ ಜೀವನಕ್ಕೆ ಅಡಿ ಇಟ್ಟಿದ್ದೇನೆ. ಅವರ ಆಶೀರ್ವಾದದಿಂದ ಶ್ರೀಮಠದ ಅಭಿವೃದ್ಧಿಗೆ ನನ್ನ ಜೀವನವನ್ನು ಅರ್ಪಣೆ ಮಾಡಿದ್ದೇನೆ ಎಂದರು.

ಬಿಜಿಎಸ್ ಆಡಳಿತ ಸೇವಾ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಓರ್ವ ದಕ್ಷ ಅಧಿಕಾರಿಯಾಗಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕಂದಾಯ ಇಲಾಖೆಯ 12 ಸಾವಿರ ಪ್ರಕರಣಗಳನ್ನು ಬಗೆಹರಿಸುವ ಮೂಲಕ ಇಡೀ ರಾಜ್ಯದಲ್ಲಿಯೇ ಶ್ರೇಷ್ಠ ಜಿಲ್ಲಾಧಿಕಾರಿ ಎಂದು ರಾಜ್ಯ ಸರ್ಕಾರ ಮತ್ತು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.