ಮೀಸಲ್ಸ್ ರುಬೆಲ್ಲಾ ಲಸಿಕೆ ಗುರಿ ಸಾಧನೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ

| Published : Sep 01 2024, 01:55 AM IST

ಮೀಸಲ್ಸ್ ರುಬೆಲ್ಲಾ ಲಸಿಕೆ ಗುರಿ ಸಾಧನೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಸಂಘ ಹಾಗೂ ವಿವಿಧ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗಎಲ್ಲ ಅರ್ಹ ಮಕ್ಕಳಿಗೆ ಮೀಸಲ್ಸ್ ರುಬೆಲ್ಲಾ ಮತ್ತು ಇತರೆ ಲಸಿಕೆಗಳನ್ನು ಕಾಲ ಕಾಲಕ್ಕೆ ನೀಡಬೇಕು. ಲಸಿಕಾ ವಂಚಿತ ಹಾಗೂ ಬಿಟ್ಟುಹೋದ ಮಕ್ಕಳನ್ನು ತಾಲೂಕುಗಳ ಹಂತದಲ್ಲೇ ಗುರುತಿಸಿ, ಪಟ್ಟಿ ಮಾಡಿ ಲಸಿಕೆ ನೀಡುವ ಮೂಲಕ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘ ಹಾಗೂ ವಿವಿಧ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಮೀಸಲ್ಸ್, ರುಬೆಲ್ಲಾ ಮತ್ತು ಇತರೆ ಲಸಿಕೆಗಳನ್ನು ಸರಿಯಾದ ವೇಳೆಗೆ ನೀಡದಿದ್ದರೆ ರೋಗ ನಿರ್ಮೂಲನೆ ನಿಗದಿತ ಸಮಯದೊಳಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು.

ಲಸಿಕಾಕರಣ ನಿಗದಿತ ಗುರಿಗಿಂತ ಶೇ.6 ಕೊರತೆಯಾಗಿದ್ದು, ಇದನ್ನು ಸರಿಪಡಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಗಳಲ್ಲಿ ಎಂ.ಆರ್.ಲಸಿಕೆಗಳ ಕೊರತೆಯಿಂದ ನೀಡಿಲ್ಲವೆಂದು ಹೇಳಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಯಿಂದ ಉಚಿತವಾಗಿ ಲಸಿಕೆ ಪಡೆಯಬಹುದು. ತಾಲ್ಲೂಕುಗಳ ಹಂತದಲ್ಲೇ ಖಾಸಗಿ ಆಸ್ಪತ್ರೆ ಗಳೊಂದಿಗೆ ಸಭೆ ನಡೆಸಿ ಈ ವ್ಯತ್ಯಾಸವನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಖಾಸಗಿ ನರ್ಸಿಂಗ್ ಹೋಂ ಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ತಾಲ್ಲೂಕು ವೈದ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಹೇಳಿದರು.

ಅಂಗನವಾಡಿಗಳಲ್ಲಿ ಮತ್ತು ಶಾಲೆಗಳಲ್ಲಿ 1 ರಿಂದ 10 ವರ್ಷದೊಳಗಿನ ಮಕ್ಕಳಿಗೆ ನಿಗದಿಪಡಿಸಲಾದ ಲಸಿಕೆಗಳನ್ನು ಹಾಕಲಾಗಿ ದೆಯೇ ಎಂದು ಪರೀಕ್ಷಿಸಿ ಆರೋಗ್ಯ ಇಲಾಖೆಗೆ ವರದಿ ನೀಡಬೇಕು. ಹಾಗೂ ಲಸಿಕಾಕರಣದ ಕುರಿತು ಸ್ಥಳೀಯರಿಂದ ಅರಿವು ಮತ್ತು ಎಲ್ಲೆಡೆ ಜಾಗೃತಿ ಮೂಡಿಸುವ ಕೆಲಸ ಇನ್ನೂ ಪರಿಣಾಮಕಾರಿಯಾಗಿ ಆಗಬೇಕು. ಪ್ರಸ್ತುತ ಎಚ್‌ಎಂಐಎಸ್ ಅಂತಹ ಆನ್‌ಲೈನ್ ಪೋರ್ಟಲ್ ಮೂಲಕ ಲಸಿಕಾ ವಂಚಿತ ಮಕ್ಕಳ ವಿವರ ಸುಲಭವಾಗಿ ಲಭ್ಯವಿದ್ದು, ಅನುಸರಣೆ ಮೂಲಕ ಆ ಮಕ್ಕಳಿಗೆ ಲಸಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಮೀಸಲ್ಸ್ ರುಬೆಲ್ಲಾ ಪ್ರಕರಣ ಪತ್ತೆ ಹಚ್ಚಲು ಎಲ್ಲ ರೀತಿಯ ಜ್ವರ ಮತ್ತು ದದ್ದು ಪ್ರಕರಣಗಳಲ್ಲಿ ಸ್ಯಾಂಪಲ್‌ನ್ನು ವೈರಾಲಜಿಗೆ 5 ದಿನಗಳ ಒಳಗಾಗಿ ಕಳುಹಿಸಿಕೊಡಬೇಕು ಎಂದು ತಿಳಿಸಿದರು.

ಡಬ್ಲ್ಯುಎಚ್‌ಒ ಕನ್ಸಲ್ಟೆಂಟ್ ಡಾ.ಎಚ್‌.ಜಿ.ಹರ್ಷಿತ್ ಮಾತನಾಡಿ, ಮೀಸಲ್ಸ್ ರುಬೆಲ್ಲಾ ಲಸಿಕೆಯನ್ನು ಶೇ.95 ಹಾಕಬೇಕೆಂದು ಗುರಿಯನ್ನು ನೀಡಲಾಗಿದ್ದು, ಜಿಲ್ಲೆಯಲ್ಲಿ ಶೇ. 89 ಲಸಿಕೆ ನೀಡಲಾಗಿದೆ. ಮುಖ್ಯವಾಗಿ ಶಿವಮೊಗ್ಗ ನಗರ ಭಾಗದಲ್ಲಿ ಲಸಿಕೆ ವಂಚಿತರನ್ನು ಹೆಚ್ಚಾಗಿ ಕಾಣಬಹುದು. ಲಸಿಕಾ ವಂಚಿತರು, ಡೋಸ್‌ಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಶೇ.80 ಜ್ವರ ಮತ್ತು ದದ್ದು ಪ್ರಕರಣಗಳನ್ನು ಮೀಸಲ್ಸ್ ರುಬೆಲ್ಲಾ ಪರೀಕ್ಷೆಗಾಗಿ 5 ದಿನಗಳ ಒಳಗೆ ಮಾದರಿಯನ್ನು ವೈರಾಲಜಿಗೆ ಕಳುಹಿಸಕೊಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್, ಡಿಹೆಚ್‌ಓ ಡಾ.ನಟರಾಜ್, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಬೋಧನಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಆರ್‌ಸಿಹೆಚ್‌ಓ ಡಾ.ನಾಗರಾಜ ನಾಯ್ಕ್, ಡಾ.ಗುಡುದಪ್ಪ, ಡಾ.ಕಿರಣ್ ಸೇರಿದಂತೆ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲ್ಲೂಕುಗಳ ಟಿಹೆಚ್‌ಓ ಗಳು, ಆರ್‌ಬಿಎಸ್‌ಕೆ ವೈದ್ಯರು ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.