ಸ್ತ್ರೀ ಅನ್ಯಾಯ ಪ್ರಶ್ನಿಸುವ ಕಾವ್ಯ ಮೂಡಿಬರಲಿ

| Published : Sep 01 2024, 01:55 AM IST

ಸಾರಾಂಶ

ಸತ್ಯದ ಪ್ರತಿಪಾದಕರಾದರೆ ಮಾತ್ರ ಕವಿಯಾಗಲು ಸಾಧ್ಯ. ಹಾಗೆ ನಮ್ಮ ಯುವ ಕವಿಗಳಿಂದ ವರ್ತಮಾನದ ಸಂಕಟಗಳನ್ನು, ಸ್ತ್ರೀಗೆ ಆಗುವ ಅನ್ಯಾಯವನ್ನು, ಎದೆಗಾರಿಕೆಯಿಂದ ಪ್ರಶ್ನಿಸುವ ಕಾವ್ಯ ಮೂಡಿಬರಲಿ ಎಂದು ಇಲ್ಲಿನ ಸಾಹಿತಿ, ಜಾನಪದ ಅಕಾಡೆಮಿ ಮಾಜಿ ಸದಸ್ಯ ಡಾ.ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸತ್ಯದ ಪ್ರತಿಪಾದಕರಾದರೆ ಮಾತ್ರ ಕವಿಯಾಗಲು ಸಾಧ್ಯ. ಹಾಗೆ ನಮ್ಮ ಯುವ ಕವಿಗಳಿಂದ ವರ್ತಮಾನದ ಸಂಕಟಗಳನ್ನು, ಸ್ತ್ರೀಗೆ ಆಗುವ ಅನ್ಯಾಯವನ್ನು, ಎದೆಗಾರಿಕೆಯಿಂದ ಪ್ರಶ್ನಿಸುವ ಕಾವ್ಯ ಮೂಡಿಬರಲಿ ಎಂದು ಇಲ್ಲಿನ ಸಾಹಿತಿ, ಜಾನಪದ ಅಕಾಡೆಮಿ ಮಾಜಿ ಸದಸ್ಯ ಡಾ.ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.

ಅವರು ಶನಿವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಮ್ಮಿಕೊಂಡಿದ್ದ ಶ್ರಾವಣ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕವಿ ತನ್ನ ಕಾಲದ ಕನ್ನಡಿಯಾಗಿ ಸಮಾಜದ ಸತ್ಯಕ್ಕೆ ಸಾಕ್ಷಿಯಾಗುತ್ತಾನೆ. ಗ್ರೀಕ್ ತತ್ವಜ್ಞಾನಿ ಪ್ಲೇಟೋ ಸಹ ಈ ಸತ್ಯದ ಪ್ರತಿಪಾದಕರಾದ ಕವಿ, ಕಲಾವಿದರಿಗೆ ತನ್ನ ರಿಪಬ್ಲಿಕ್‌ನಲ್ಲಿ ಅವಕಾಶ ಕಲ್ಪಿಸಿರಲಿಲ್ಲ. ಹೊಸ ತಲೆಮಾರಿನ ಕವಿಗಳು ವರ್ತಮಾನವನ್ನು ಚಾರಿತ್ರಿಕ ದೃಷ್ಟಿಯಿಂದ ಅಥೈಸಿಕೊಂಡು ಮಹಿಳಾ ಸಬಲೀಕರಣಕ್ಕೆ ಧ್ವನಿಯಾಗಬೇಕು. ಕವಿಗಳು ನಿರಂತರ ಅಭ್ಯಾಸದೊಂದಿಗೆ ತಮ್ಮೊಳಗಿನ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಚೆನ್ನಾಗಿ ಬಳಸಿಕೊಂಡು, ಕಾವ್ಯ ರಚನೆಯಲ್ಲಿ ಗಟ್ಟಿಯಾದ ಭಾಷಾ ಪರಂಪರೆಗೆ ನೆಲೆಯಾಗಬೇಕು ಎಂದರು.

ಕಾವ್ಯ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಾಯಿಸುತ್ತಾ ಬಂದಿದೆ. ಪಂಪನು ತಾನು ಬದುಕಿದ ಪರಿಸರದ ಕನ್ನಡಿಯಾಗಿ ಕಾವ್ಯ ರಚಿಸಿದನು. ಅದು ಮಾನವೀಯ ಪರವಾಗಿ ಕರ್ಣ ದುರ್ಯೋಧನರನ್ನು ಜೊತೆಯಾಗಿಸಿ ಮಾನವ ಕುಲದ ಐಕ್ಯತೆ ಸಾರಿರುವನು. ಹಾಗೆ ನಮ್ಮ ಯುವ ಕವಿಗಳು ವರ್ತಮಾನದ ಸಂಕಟಗಳನ್ನು ಹಾಗೂ ಸ್ತ್ರೀಗೆ ಆಗುವ ಅನ್ಯಾಯವನ್ನು ಪ್ರಶ್ನಿಸುವಂತ ಕಾವ್ಯ ರಚನೆ ಕಡೆಗೆ ಮಹತ್ವ ನೀಡಲಿ ಎಂದರು.

ಸಾಹಿತಿ ಡಾ.ಸಿ.ಎಂ.ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾವ್ಯ ರಚಿಸುವ ಯುವ ಪ್ರತಿಭೆಗಳು ಕಾವ್ಯ ಪರಂಪರೆಯನ್ನು ಓದಿಕೊಳ್ಳಬೇಕು. ದ.ರಾ.ಬೇಂದ್ರೆ, ಕುವೆಂಪು, ಜಿ.ಎಸ್.ಶಿವರುದ್ರಪ್ಪ ಮೊದಲಾದ ಹಿರಿಯ ತಲೆಮಾರಿನ ಕವಿಗಳ ಕಾವ್ಯದ ಓದು ತಮ್ಮಲ್ಲಿ ಹೊಸತನವನ್ನು ಹಾಗೂ ಕಾವ್ಯ ಕಟ್ಟುವ ಶಿಸ್ತನ್ನು ಬೆಳೆಸುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಎಸ್.ಬಿ.ಮಡಿವಾಳರ ಕಾವ್ಯ ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ರೆಡ್ಡಿ ಎಚ್.ನಡುವಿನಮನಿ ಅತಿಥಿಗಳಾಗಿ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ಎಚ್.ಎಸ್.ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ಕಮಲಾಕ್ಷಿ ಅಳಗುಂಡಿ, ಪೂಜಾ ಗೌಳಿ, ಸಿದ್ದು ರಾವಳ, ಅನ್ನಪೂರ್ಣಾ ಜವಳಿ, ರುಬಿಯಾ ದೋಟೆಗಾರ, ಅಕ್ಷತಾ ಭಜಂತ್ರಿ, ಸುದಾ ದಳವಾಯಿ, ತ್ರಿವೇಣಿ ಕುಮಚಗಿ ಸ್ವರಚಿತ ಕಾವ್ಯವಾಚನ ಮಾಡಿದರು. ಪ್ರೊ. ಪರಶುರಾಮ ಮಾದರ ಸ್ವಾಗತಿಸಿದರು. ಯಲ್ಲಪ್ಪ ಮನ್ನಿಕಟ್ಟಿ ವಂದಿಸಿದರು.