ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ರಾಜಮುಡಿ, ರಾಜಭೋಗ ಭತ್ತದ ಬೆಳೆಗೆ ಹೆಸರಾದ ತಾಲೂಕಿನ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ನಾಲಾ ವ್ಯಾಪ್ತಿಯಲ್ಲಿ ರೈತರು ಭತ್ತದ ನಾಟಿ ಕಾರ್ಯ ಆರಂಭಿಸಿದ್ದಾರೆ.ಮೈಸೂರು ಅರಸರ ಕಾಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೊದಲ ಬಾರಿಗೆ ಕಟ್ಟಿದ ಅಣೆಕಟ್ಟೆ ಎಂಬ ಹೆಗ್ಗಳಿಗೆ ಹೊಂದಿರುವ ಕಟ್ಟೇಪುರದ ಕೃಷ್ಣರಾಜ ಅಣೆಕಟ್ಟೆ ಭತ್ತದ ಬೆಳೆ ಬೆಳೆಯಲು ಈ ಭಾಗದ ರೈತರ ಜೀವನಾಡಿಯಾಗಿದೆ. ನದಿ ಪಾತ್ರದಲ್ಲಿ ಹಾದು ಹೋಗಿರುವ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ 9 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ. ಅರಕಲಗೂಡು ತಾಲೂಕು ಮಾತ್ರವಲ್ಲದೇ ಎಡದಂಡೆ ನಾಲೆ ಕೆ.ಆರ್. ನಗರ ತಾಲೂಕಿನ ಪಶುಪತಿ ಹಾಗೂ ಬಲದಂಡೆ ನಾಲೆ ಚುಂಚನಕಟ್ಟೆಯ ಕೆಸ್ತೂರು ಗೇಟ್‌ವರೆಗೆ ಹಾದುಹೋಗಿದೆ. ಇವೆರಡು ನಾಲೆಗಳಿಗೆ ನೀರು ಹರಿಸಲಾಗಿದ್ದು ರೈತರು ಭತ್ತದ ಸಸಿ ಮಡಿ ಬೆಳೆಸಿ ನಾಟಿ ಕಾರ್ಯ ನಡೆಸಿದ್ದಾರೆ.ವಿಸ್ತಾರವಾದ ನೀರಾವರಿ ಪ್ರದೇಶ ಹೊಂದಿರುವ ನಾಲಾ ಅಚ್ಚುಕಟ್ಟಿನಲ್ಲಿ ರೈತರು ಮುಂಗಾರು ಮಳೆಗೂ ಮುನ್ನ ಹೆಚ್ಚಿನದಾಗಿ ಹೊಗೆಸೊಪ್ಪು ನಾಟಿ ಕಾರ್ಯ ನಡೆಸುತ್ತಾರೆ. ಇದೀಗ ಬಹುತೇಕ ಕಡೆ ತಂಬಾಕು ಕಟಾವು ಕಾರ್ಯಪೂರ್ಣಗೊಂಡಿದೆ. ಈ ಬಾರಿ ಒಂದು ತಿಂಗಳ ಕಾಲ ಮುಂಗಾರು ಮಳೆ ಎಡಬಿಡದೆ ಸುರಿದ ಪರಿಣಾಮ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದ ತಂಬಾಕು ಬೆಳೆ ನೀರಿನಲ್ಲಿ ಮುಳುಗಡೆಯಾಗಿತ್ತು. ಕೆಲವು ರೈತರು ನೆಲಗಡಲೆ, ಆಲಸಂದೆ, ಉದ್ದು, ಹೆಸರು, ಎಳ್ಳು ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆದಿದ್ದರು. ಇನ್ನೇನು ಫಸಲು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ನದಿ ಉಕ್ಕೇರಿ ಅನೇಕ ಕಡೆ ಪ್ರವಾಹದ ನೀರಿನಲ್ಲಿ ಸಿಲುಕಿ ಸಾಕಷ್ಟು ಬೆಳೆ ನಾಶವಾಗಿ ಅನ್ನದಾತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು. ಸದ್ಯಕ್ಕೆ ಮಳೆ ಬಿಡುವು ನೀಡಿದ್ದರಿಂದ ಅಲ್ಪಸ್ವಲ್ಪ ಉಳಿದ ತಂಬಾಕು ಗಿಡಗಳ ಕಟಾವು ಕೈಗೊಂಡು ರೈತರು ಭತ್ತದ ನಾಟಿಗಾಗಿ ಕೃಷಿ ಚಟುವಟಿಕೆ ಬಿರುಸುಗೊಳಿಸಿರುವುದು ಕಂಡುಬಂದಿದೆ.
ಈ ಭಾಗಕ್ಕೆ ಹೊಗೆಸೊಪ್ಪು ಬೆಳೆ ಕಾಲಿಡುವ ಮುನ್ನ ಹೆಚ್ಚಿನದಾಗಿ ರೈತರು ಈ ವೇಳೆಗಾಗಲೇ ಭತ್ತದ ನಾಟಿ ಕಾರ್ಯವನ್ನು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಪೂರ್ಣಗೊಳಿಸುತ್ತಿದ್ದರು. ಈಗ ತಂಬಾಕು ಕಟಾವು ಕಾರ್ಯ ನಡೆಸುವುದು ತಡವಾಗುವುದರಿಂದ ಭತ್ತದ ಸಸಿ ಮಡಿ ಬೆಳೆಸಿ ಸೆಪ್ಟಂಬರ್ ತಿಂಗಳಿನಲ್ಲಿ ನಾಟಿ ಕಾರ್ಯ ಮುಗಿಸುವ ವಾಡಿಕೆ ಬೆಳೆಸಿಕೊಂಡಿದ್ದಾರೆ. ಇದರ ಪರಿಣಾಮ ಭತ್ತದ ಇಳುವರಿ ಮೇಲೆ ಹೊಡೆತ ಬೀಳುತ್ತಿದೆ. ಸೆಪ್ಟಂಬರ್ ತಿಂಗಳಿನಲ್ಲಿ ಭತ್ತದ ಪೈರು ನಾಟಿ ಮಾಡುವುದರಿಂದ ಗರ್ಭಧರಿಸುವ ಬೆಳೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಚಳಿಗಾಲದ ಕೊರೆಗೆ ಸಿಲುಕುತ್ತಿದೆ. ಹಾಲುಗಟ್ಟುವ ಭತ್ತದ ಕಾಳು ಕೊರೆ ನೀರಿಗೆ ಕರಗಿ ಜೊಳ್ಳಾಗಿ ಇಳುವರಿ ಕೂಡ ಕುಂಠಿತಗೊಳ್ಳುತ್ತಿದೆ. ಆದಾಯ ತರುವ ತಂಬಾಕು ಬೆಳೆಗೆ ಮಾರು ಹೋಗಿರುವುದರಿಂದ ರೈತರು ಪ್ರಮುಖ ಆಹಾರದ ಭತ್ತದ ಬೆಳೆಯಲ್ಲಿ ಇಳುವರಿ ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ.ಮೈಸೂರು ಅರಸರ ಕಾಲದಲ್ಲಿ ಕಟ್ಟಿದ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ಈಗಾಗಲೇ ನೂರು ವರ್ಷ ಪೂರೈಸಿದ್ದು, ಅಚ್ಚುಕಟ್ಟು ಪ್ರದೇಶವು ಶತಮಾನದಿಂದಲೂ ಭತ್ತದ ಬೆಳೆಗೆ ಪ್ರಸಿದ್ಧಿಯಾಗಿದೆ. ತೀವ್ರ ಬರಗಾಲ ಎದುರಿಸಿದ ಒಂದೆರಡು ಬಾರಿ ಮಾತ್ರ ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದು ಹೊರತುಪಡಿಸಿ, ಮತ್ಯಾವ ಬೆಳೆ ವರ್ಷದಲ್ಲಿ ನಾಲೆಗೆ ನೀರು ನಿಲ್ಲಿಸದೆ ನಿರಂತರವಾಗಿ ಹರಿದಿದ್ದು ಜೀವನದಿ ಕಾವೇರಿ ಈ ಭಾಗದ ಅನ್ನದಾತರ ಬಾಳು ಹಸಿರಾಗಿಸಿದೆ ಎನ್ನುತ್ತಾರೆ ರೈತಾಪಿ ವರ್ಗದ ಜನರು.