ನಕ್ಸಲ್ ಬಾಧಿತ ಪ್ರದೇಶಗಳ ಮೂಲಭೂತ ಸೌಕರ್ಯಕ್ಕೆ ಜಿಲ್ಲಾಧಿಕಾರಿ ಸೂಚನೆ

| Published : Oct 07 2024, 01:33 AM IST

ನಕ್ಸಲ್ ಬಾಧಿತ ಪ್ರದೇಶಗಳ ಮೂಲಭೂತ ಸೌಕರ್ಯಕ್ಕೆ ಜಿಲ್ಲಾಧಿಕಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ನಕ್ಸಲ್ ಬಾಧಿತ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಬೇಡಿಕೆ ಈಡೇರಿಸಲು ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಕ್ಸಲ್ ಚಟುವಟಿಕೆಗಳನ್ನು ತೊರೆದು ಮುಖ್ಯವಾಹಿನಿಗೆ ಮರಳಿರುವ ಕುಟುಂಬಗಳ ಅಭಿವೃದ್ಧಿ ಸ್ಥಿತಿಗತಿಗಳು ಅವರಿಗೆ ನೀಡಬೇಕಾದ ಸರ್ಕಾರಿ ಸೌಲಭ್ಯಗಳು, ಬೇಡಿಕೆಗಳು ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ನಕ್ಸಲ್‌ ಚಟುವಟಿಕೆ ತೊರೆದು ಮುಖ್ಯವಾಹಿನಿಗೆ ಮರಳಿದವರ ಕುಟುಂಬಗಳ ಸ್ಥಿತಿಗತಿ ಕುರಿತ ಸಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಕ್ಸಲ್ ಬಾಧಿತ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಬೇಡಿಕೆ ಈಡೇರಿಸಲು ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಕ್ಸಲ್ ಚಟುವಟಿಕೆಗಳನ್ನು ತೊರೆದು ಮುಖ್ಯವಾಹಿನಿಗೆ ಮರಳಿರುವ ಕುಟುಂಬಗಳ ಅಭಿವೃದ್ಧಿ ಸ್ಥಿತಿಗತಿಗಳು ಅವರಿಗೆ ನೀಡಬೇಕಾದ ಸರ್ಕಾರಿ ಸೌಲಭ್ಯಗಳು, ಬೇಡಿಕೆಗಳು ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ, ಎನ್.ಆರ್. ಪುರ ಹಾಗೂ ಮೂಡಿಗೆರೆ ನಕ್ಸಲ್ ಪೀಡಿತ ಗ್ರಾಮಗಳು, ಪ್ರದೇಶಗಳನ್ನು ಹೊಂದಿರುವ ತಾಲೂಕುಗಳಾಗಿವೆ. ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ವಿದ್ಯುತ್, ಕುಡಿಯುವ ನೀರು, ರಸ್ತೆ, ವಸತಿ ಸೇರಿದಂತೆ ಅವರ ಬೇಡಿಕೆ ಮೂಲಭೂತ ಸೌಕರ್ಯಗಳನ್ನು ಶೀಘ್ರವಾಗಿ ಕಲ್ಪಿಸಿಕೊಡಬೇಕು ಎಂದರು.ನಕ್ಸಲ್ ಬಾದಿತ ಪ್ರದೇಶಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ರಸ್ತೆಗಳು ಗಿಡಗಂಟಿಗಳಿಂದ ಮುಚ್ಚಿದ್ದಲ್ಲಿ ಅವುಗಳನ್ನು ತೆರವುಗೊಳಿಸಿ ಅವರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಆ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿ ಕೊರತೆಯಾಗದಂತೆ ಕ್ರಮ ವಹಿಸಿ, ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧಿ ನೀಡಬೇಕು. ಕುಡಿಯುವ ನೀರಿನ ಮೂಲ ಗುರುತಿಸಿ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಹೇಳಿದರು. ಮಕ್ಕಳನ್ನು ಶಾಲೆಗೆ ಕರೆತಂದು ಗುಣಮಟ್ಟದ ಶಿಕ್ಷಣ ಒದಗಿಸಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡಬೇಕು. ವಿದ್ಯುತ್ ಕಂಬಗಳು ಬಿದ್ದು ಹೋದಲ್ಲಿ ಕೂಡಲೇ ಕಂಬಗಳನ್ನು ಪುನರ್ ಸ್ಥಾಪಿಸಿ ವಿದ್ಯುತ್ ಕೊರತೆಯಾಗದಂತೆ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ ಕಡಿತವಾದಲ್ಲಿ ಟ್ರಾನ್ಸ್ ಫಾರ್ಮರ್‌ ಕೊರತೆ ಇದ್ದಲ್ಲಿ ತುರ್ತಾಗಿ ಕ್ರಿಯಾ ಯೋಜನೆ ಸಲ್ಲಿಸಬೇಕು. ಬಿಎಸ್‌ಎನ್‌ಎಲ್ ನೆಟ್ ವರ್ಕ್ ಪೂರೈಸಲು ಕ್ರಮವಹಿಸಬೇಕು. ಸಂಬಂಧ ಪಟ್ಟ ಅಧಿಕಾರಿಗಳು ನಕ್ಸಲ್ ಬಾಧಿತ ಪ್ರದೇಶಗಳಿಗೆ ಖುದ್ದಾಗಿ ತೆರಳಿ ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಆಲಿಸಿ ಆತ್ಮ ವಿಶ್ವಾಸ ತುಂಬುವ ಜೊತೆಗೆ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಹಿಮ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 6 ಕೆಸಿಕೆಎಂ 1ನಕ್ಸಲ್‌ ಚಟುವಟಿಕೆ ತೊರೆದು ಮುಖ್ಯ ವಾಹಿನಿಗೆ ಬಂದಿರುವ ಕುಟುಂಬಗಳಿಗೆ ಸರ್ಕಾರಿ ಸವಲತ್ತು ನೀಡುವ ಕುರಿತು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಯಿತು.