ಸಾರಾಂಶ
ನಾವೆಲ್ಲರೂ ಒಟ್ಟಾಗಿ ವೈಯಕ್ತಿಕವಾಗಿ ಹಾಗೂ ನಾಗರಿಕ ವ್ಯಕ್ತಿ ಭಾವದಿಂದ ಒಗ್ಗಟ್ಟಿನಿಂದ ಸಾಮಾಜಿಕ ಕಳಂಕ-ಪಿಡುಗು ಹೋಗಲಾಡಿಸಿ ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗೊಳಪಡಿಸಿ ಬಾಪೂಜಿಯವರ ನಂಬಿಕೆ ಮತ್ತು ಸದುದ್ದೇಶ ಸಾಕಾರಗೊಳಿಸಲು ಸನ್ನದ್ಧರಾಗಿರಬೇಕು
ಕೊಪ್ಪಳ: ಜಿಲ್ಲೆಯಲ್ಲಿರುವ ಎಲ್ಲ ಸಂಪನ್ಮೂಲ ಬಳಸಿಕೊಂಡು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಅಗತ್ಯ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳ ಕಾರ್ಯಾಲಯದಿಂದ ಜರುಗಿದ ಕುಷ್ಠರೋಗ ನಿರ್ಮೂಲನಾ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ನಾವು ಬದ್ಧರಾಗಿರಬೇಕು. ಕುಷ್ಠರೋಗಿಗಳಿಗೆ ನಮ್ಮಿಂದ ಯಾವುದೇ ರೀತಿ ತಾರತಮ್ಯ ಆಗದಂತೆ ಎಚ್ಚರ ವಹಿಸಬೇಕು. ಬೇರೆಯವರಿಂದಲೂ ಯಾವುದೇ ರೀತಿಯ ಶೋಷಣೆಗಳಾಗದಂತೆ ನೋಡಿಕೊಳ್ಳಬೇಕು. ನಾವೆಲ್ಲರೂ ಒಟ್ಟಾಗಿ ವೈಯಕ್ತಿಕವಾಗಿ ಹಾಗೂ ನಾಗರಿಕ ವ್ಯಕ್ತಿ ಭಾವದಿಂದ ಒಗ್ಗಟ್ಟಿನಿಂದ ಸಾಮಾಜಿಕ ಕಳಂಕ-ಪಿಡುಗು ಹೋಗಲಾಡಿಸಿ ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗೊಳಪಡಿಸಿ ಬಾಪೂಜಿಯವರ ನಂಬಿಕೆ ಮತ್ತು ಸದುದ್ದೇಶ ಸಾಕಾರಗೊಳಿಸಲು ಸನ್ನದ್ಧರಾಗಿರಬೇಕು ಎಂದು ತಿಳಿಸಿದ ಅವರು, ಕಳಂಕವನ್ನು ಕೊನೆಗೊಳಿಸಿ ಘನತೆ ಎತ್ತಿ ಹಿಡಿಯಿರಿ ಎಂಬ ಘೋಷವಾಕ್ಯದೊಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಪ್ರಕಾಶ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರ ಎಂ.ಎಚ್., ಡಿಡಿಪಿಐ ಶ್ರೀಶೈಲ ಬಿರಾದಾರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಭಿತ್ತಿಪತ್ರ ಬಿಡುಗಡೆ: ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ನಲಿನ್ ಅತುಲ್ ಕುಷ್ಠರೋಗ ಜಾಗೃತಿ ಪೋಸ್ಟರ್ ಬಿಡುಗಡೆಗೊಳಿಸಿದರು.