ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 2025ರ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷಾ ಕಾರ್ಯವನ್ನು ಗಣತಿದಾರರು ಈಗಾಗಲೇ ಆನ್ ಲೈನ್ ಮೂಲಕ ಮಾಡಿ ಶೇ. 90.10 ರಷ್ಟು ಪ್ರಗತಿಯನ್ನು ಸಾಧಿಸಿದ್ದಾರೆ. ಈ ಸಮೀಕ್ಷಾ ಕಾರ್ಯದ ಅವಧಿಯನ್ನು ಈ ತಿಂಗಳ 19 ರಿಂದ 28 ರವರೆಗೆ ಆಯೋಗ ವಿಸ್ತರಿಸಿದೆ. ಜಿಲ್ಲೆಯ ಜನತೆ ಈ ಅವಕಾಶ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮನವಿ ಮಾಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ಶುಕ್ರವಾರ ನಡೆದ ಆನ್ ಲೈನ್ ಮೂಲಕ ವಿಡಿಯೋ ಸಂವಾದ ಸಭೆಯ ನಂತರ ಮಾತನಾಡಿ, ಪರಿಶಿಷ್ಟ ಜಾತಿಗಳ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಡಾ. ಹೆಚ್.ಎನ್. ನಾಗಮೋಹನದಾಸ್ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ 101 ಜಾತಿಗಳಿಗೆ ಸೇರಿದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಮತ್ತು ಇತ್ಯಾಧಿ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸುತ್ತಿದೆ ಎಂದರು.
ಸಮೀಕ್ಷೆ ಅವಧಿ ವಿಸ್ತರಣೆಸಮೀಕ್ಷೆಯನ್ನು ಮೇ 5 ರಿಂದ 21 ರವರೆಗೆ ಕೈಗೊಳ್ಳಲು ಸೂಚಿಸಿತ್ತು. ಅದರಂತೆ ಜಿಲ್ಲೆಯಲ್ಲಿ ಗಣತಿ ಕಾರ್ಯವು ಪ್ರಗತಿಯಲ್ಲಿತ್ತು. ಈ ಸಮೀಕ್ಷಾ ಕಾರ್ಯದ ಅವಧಿಯನ್ನು ಆಯೋಗ ವಿಸ್ತರಿಸಿ ಪ್ರತಿಯೊಂದು ಕುಟುಂಬದ ಸಮೀಕ್ಷೆಯನ್ನು ಕಡ್ಡಾಯವಾಗಿ ಮಾಡಲು ಸೂಚನೆ ನೀಡಿದೆ. ಮೇ 19 ರಿಂದ ಮೇ 25 ರವರೆಗೆ ಸಮೀಕ್ಷೇದಾರರು ವಾರ್ಡ್ ಹಾಗೂ ಗ್ರಾಮ ಮಟ್ಟದಲ್ಲಿ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಮೇ 26 ರಿಂದ ಮೂರು ದಿನಗಳ ಕಾಲ ವಿಶೇಷ ಶಿಬಿರ ಏರ್ಪಡಿಸಿ ಸಮೀಕ್ಷೆ ನಡೆಸುವುದು ಅಲ್ಲದೇ ಸಾರ್ವಜನಿಕರು ಮೇ 19 ರಿಂದ 28 ರವರೆಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಿ ಅವಧಿಯನ್ನು ವಿಸ್ತರಿಸಿದೆ ಎಂದರು.
ಗಣತಿದಾರರು ಮೇ 26, 27 ಮತ್ತು 28ನೇ ತಾರೀಕುಗಳಂದು ನಡೆಯುವ ವಿಶೇಷ ಶಿಬಿರದಲ್ಲಿ ಖುದ್ದಾಗಿ ಉಪಸ್ಥಿತರಿದ್ದು, ಮನೆ ಮನೆ ಸಮೀಕ್ಷೆಯಲ್ಲಿ ಆಕಸ್ಮಿಕವಾಗಿ ಕೈಬಿಟ್ಟು ಹೋದಂತಹ ಪರಿಶಿಷ್ಟ ಜಾತಿಯ ಕುಟುಂಬದವರು ಶಿಬಿರಕ್ಕೆ ಆಗಮಿಸಿದಾಗ ಸಮರ್ಪಕವಾಗಿ ಹಾಗೂ ಸೂಸೂತ್ರವಾಗಿ ಸಮೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಮೀಕ್ಷಾ ಮೇಲ್ವಿಚಾರಕರು ನಿಗಾವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.ನಿಖರ ಮಾಹಿತಿ ನೀಡಿಗಣತಿದಾರರು ಕೈಗೊಳ್ಳುವ ಮನೆ ಮನೆ ಸಮೀಕ್ಷೆ, ವಿಶೇಷ ಶಿಬಿರ ಹಾಗೂ ಆನ್ ಲೈನ್ ಮೂಲಕ ಸ್ವಯಂ ಘೋಷಣೆಯ ಗಣತಿ ಕಾರ್ಯಕ್ಕೆ ಬಾಕಿ ಇರುವ ಸಾರ್ವಜನಿಕರು, ಸಂಬಂಧಪಟ್ಟ ಸಮುದಾಯದವರು, ಮುಖಂಡರು ಹೆಚ್ಚಿನ ಸಹಕಾರವನ್ನು ನೀಡಬೇಕು. ಈ ಮಹೋನ್ನತ ಕಾರ್ಯಕ್ಕೆ ನಾಗರಿಕರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು. ಗಣತಿದಾರರು ಕೇಳುವ ಮಾಹಿತಿಯನ್ನು ನಿಖರವಾಗಿ ಹಾಗೂ ನೈಜವಾಗಿ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ, ವಾರ್ತಾ ಸಹಾಯಕ ಎಂ.ಆರ್ ಮಂಜುನಾಥ್ ಮತ್ತಿತರರು ಇದ್ದರು.
.