ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿಯಲ್ಲಿ ಇದೇ ಆ.10ರಂದು ಜಲಪಾತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭರಚುಕ್ಕಿ ಜಲಪಾತೋತ್ಸವ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯು ವೈವಿಧ್ಯಮಯ ಹಲವು ಪ್ರವಾಸಿ ತಾಣಗಳನ್ನು ಹೊಂದಿದ್ದು, ಚಲುವ ಚಾಮರಾಜನಗರ ಹೆಸರಿನಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಲಪಾತೋತ್ಸವವನ್ನು ಆ.10ರಂದು ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಆ.10ರಂದು ಸಂಜೆ ಸಿಎಂ, ಡಿಸಿಎಂ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ವಿವಿಧ ಇಲಾಖೆಗಳ ಸಚಿವರು, ಶಾಸಕರು, ಗಣ್ಯರು ಆಗಮಿಸಲಿದ್ದಾರೆ. ಈ ವೈಶಿಷ್ಟ್ಯ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಜಲಪಾತದ ಸೊಬಗನ್ನು ಬಣ್ಣದ ಬೆಳಕಿನಲ್ಲಿ ನೋಡುವ ಅವಕಾಶವನ್ನು ಮಾಡಲಾಗುತ್ತಿದೆ. ಜಲಪಾತೋತ್ಸವ ವೇದಿಕೆ ಕಾರ್ಯಕ್ರಮವು ನಡೆಯಲಿದ್ದು, ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಎಲ್ಲವು ಸುಸೂತ್ರವಾಗಿ ನೆರವೇರಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ನಿಯೋಜನೆಗೊಂಡ ಅಧಿಕಾರಿಗಳು ಎಲ್ಲ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಪ್ರವಾಸಿಗರು ಆಗಮಿಸಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ವ್ಯವಸ್ಥೆ ಕೈಗೊಳ್ಳಬೇಕು. ವಾಹನಗಳ ನಿಲುಗಡೆಗೆ ನಿಗದಿತ ಸ್ಥಳವನ್ನು ಗೊತ್ತು ಮಾಡಬೇಕು. ವಿವಿಧ ಭಾಗಗಳಿಂದ ಬರುವ ವಾಹನಗಳಿಗೆ ಸಂಚರಿಸಬೇಕಾದ ಮಾರ್ಗಗಳ ಬಗ್ಗೆ ಮಾಹಿತಿ ನೀಡಬೇಕು. ಜನ, ವಾಹನ ದಟ್ಟಣೆ ಆಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಜಲಪಾತೋತ್ಸವ ವೇದಿಕೆ ಬಳಿ ವಿವಿಧ ಮಳಿಗೆಗಳನ್ನು ತೆರೆಯಬೇಕು. ಆಹಾರ ತಿನಿಸು ಮಳಿಗೆಗಳಿಗೂ ಅವಕಾಶ ಮಾಡಿಕೊಡಲಾಗುತ್ತಿದೆ. ಬರುವ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಆಕರ್ಷಿಸುವ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳು ಇರಬೇಕಿದೆ. ಹೀಗಾಗಿ ಎಲ್ಲ ಅವಶ್ಯಕ ಕ್ರಮಗಳನ್ನು ತುರ್ತಾಗಿ ನಿರ್ವಹಿಸುವಂತೆ ಸೂಚಿಸಿದರು.ಜಿಪಂ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ.ಲಕ್ಷ್ಮೀ, ಡಿವೈಎಸ್ಪಿಗಳಾದ ಲಕ್ಷ್ಮಯ್ಯ, ಧಮೇಂದ್ರ, ತಹಶೀಲ್ದಾರರಾದ ಮಂಜುಳಾ, ಗಿರಿಜಾ, ಜಯಪ್ರಕಾಶ್, ರಮೇಶ್‌ಬಾಬು, ತಾಪಂ ಕಾರ್ಯನಿರ್ವಾಹಕಾಧಿಕಾರಿ ಪೂರ್ಣಿಮ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮಂಜುಳಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಉದಯ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.