ಬ್ಯಾಡಗಿ: ಕಾಲಾವಕಾಶದ ನೆಪದಲ್ಲಿ ಕಳೆದ 8 ದಿನಗಳಿಂದ ಕಟ್ಟಡ ತೆರವುಗೊಳಿಸಿಕೊಳ್ಳದೇ ಇಡೀ ಕಾರ್ಯಾಚರಣೆಗೆ ಅಡ್ಡಿಯಾಗಿದ್ದವರ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಚುರುಕಿನ ಕಾರ್ಯಾಚರಣೆಗಿಳಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭಾನುವಾರ ಬೆಳ್ಳಂಬೆಳಗ್ಗೆ 5 ಬೃಹತ್ ಕಟ್ಟಡಗಳನ್ನು ನೆಲಸಮಗೊಳಿಸುವ ಮೂಲಕ ಮಾಲೀಕರಿಗೆ ಶಾಕ್ ನೀಡಿದರು.

ಸದರಿ ಕಟ್ಟಡಗಳ ಮಾಲೀಕರು ಹಿಂದೆಯೂ ಕೋರ್ಟನಲ್ಲಿ ದಾವೆ ಹೂಡುವ ಮೂಲಕ ಜಿಲ್ಲಾಡಳಿತಕ್ಕೆ ಹಿನ್ನಡೆಯಾಗುವಂತೆ ಮಾಡಿದ್ದರಲ್ಲದೇ, ಇಲ್ಲಸಲ್ಲದ ಕಾರಣಗಳನ್ನು ಮುಂದಿಟ್ಟು ಮುಖ್ಯರಸ್ತೆಯ ಬಹುತೇಕ ಮಾಲೀಕರು ಜಿಲ್ಲಾಡಳಿತದ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದರು. ಹೀಗಾಗಿ ಕಳೆದ 12 ವರ್ಷಗಳ ಹಿಂದೆಯೇ ಆಗಬೇಕಾಗಿದ್ದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಹಲವಾರು ಹೋರಾಟಗಳ ಬಳಿಕ ಇದೀಗ ಚಾಲನೆ ದೊರೆತಿದ್ದು ಮೊದಲ ಹಂತವನ್ನು ಪೂರ್ಣಗೊಳಿಸಿದೆ.

ಸಾರ್ವಜನಿಕವಾಗಿ ಪ್ರಶ್ನೆ: ಸದರಿ 5 ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ವಿಳಂಬ ಧೋರಣೆ ತೋರಿದ ಜಿಲ್ಲಾಧಿಕಾರಿಗಳ ನಡೆಯನ್ನೂ ಸಹ ಪ್ರಶ್ನಿಸಿದ್ದ ಇನ್ನುಳಿದ ಮಾಲೀಕರು ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೆ ಮತ್ತೊಂದು ಮಾಡದಂತೆ ಸಾರ್ವಜನಿಕವಾಗಿ ಪ್ರಶ್ನಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಮುಲಾಜಿಲ್ಲದೇ ಕಟ್ಟಡ ತೆರವುಗೊಳಿಸಿದರು.ಮುಜುಗರ ತಪ್ಪಿಸಿಕೊಂಡ ಜಿಲ್ಲಾಧಿಕಾರಿ: ಸದರಿ ಆರೋಪದಿಂದ ಮುಜುಗರಕ್ಕೆ ಒಳಗಾಗಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಅವರ ಸ್ಪಷ್ಟ ಸಂದೇಶ ನೀಡುವ ಮೂಲಕ ಜೆಸಿಬಿ ಹಾಗೂ ಹಿಟಾಚಿಗಳ ಮೂಲಕ ಆಗಮಿಸಿ ಯಾವುದೇ ಸೂಚನೆಯನ್ನು ನೀಡದೆ ಕಟ್ಟಡ ತೆರವುಗೊಳಿಸುವ ಮೂಲಕ ಸಾರ್ವಜನಿಕರಿಂದ ಅಗಿದ್ದ ಮುಜುಗರವನ್ನು ತಪ್ಪಿಸಿಕೊಂಡರು.

ಅಡ್ಡಿ ಆತಂಕಗಳು ಬಹುತೇಕ ನಿವಾರಣೆ: ಈಗಾಗಲೇ ಶೇ.95ರಷ್ಟು ಕಟ್ಟಡ ತೆರವು ಕಾರ್ಯಾಚರಣೆ ಮುಕ್ತಾಯವಾಗಿದ್ದು, ಕೆಲವರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಬೇಗನೆ ಕಟ್ಟಡವನ್ನು ತೆರವುಗೊಳಿಸಿಕೊಂಡರೇ ಕೆಲವರು ಉದ್ಧಟತನ ತೋರಿದ ಪರಿಣಾಮ ಶೇ.5ರಷ್ಟು ಕಟ್ಟಡ ಇನ್ನೂ ಬಾಕಿ ಉಳಿದಿವೆ. ಕಳೆದ 3 ದಿನಗಳಿಂದ ಮಳೆ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಇನ್ನಿತರ ಕಾರ್ಯಗಳಿರುವ ಕಾರಣ ಆದಷ್ಟು ಬೇಗ ಪಟ್ಟಣದ ಮುಖ್ಯರಸ್ತೆಯಲ್ಲಿನ ಅವಶೇಷಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಎದುರಾಗಿದೆ.ಪಟ್ಟಣದ ಮುಖ್ಯರಸ್ತೆಯಲ್ಲಿ ಬಹತೇಕ ಮಣ್ಣಿನ ಹಳೆಯ ಕಟ್ಟಡಗಳಿದ್ದು ಶಿಥಿಲಾವಸ್ಥೆಗೆ ತಲುಪಿವೆ. ಮಳೆಯ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಸುರಕ್ಷತಾ ದೃಷ್ಟಿಯಿಂದಲೂ ವೇಗವಾಗಿ ಕ್ರಮ ಕೈಗೊಳ್ಳುತ್ತಿದೆ. ಎಲ್ಲರೂ ನಮ್ಮ ತಾಳ್ಮೆ ಪರೀಕ್ಷೆ ಮಾಡದೇ ತೆರವು ಮಾಡಿಕೊಂಡು ಸಹಕರಿಸಿ ಇದರಿಂದ ಪಟ್ಟಣದ ಅಭಿವೃದ್ಧಿಗೆ ವೇಗ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.ಕಟ್ಟಡಗಳ ತೆರವು ಕೆಲಸವು ಭರದಿಂದ ಸಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲದ ಹಾಗೇ ಎಲ್ಲವನ್ನೂ ತೆರವು ಮಾಡಲಾಗುತ್ತಿದೆ. ಮುಖ್ಯರಸ್ತೆ ಮಾಲೀಕರು ತಮ್ಮ ವಸ್ತುಗಳನ್ನು ತೆಗೆದು ಇನ್ನಷ್ಟು ಸಹಕಾರ ನೀಡಿದಲ್ಲಿ ಇನ್ನಷ್ಟು ವೇಗವಾಗಿ ಕೆಲಸ ಮಾಡಲು ಸಾಧ್ಯ ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹೇಳಿದರು.