ಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

| Published : May 11 2025, 01:23 AM IST

ಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ನಗರದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ಹಿಂಗಾರು ಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾವೇರಿ: ನಗರದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ಹಿಂಗಾರು ಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಹಾವೇರಿ ಸೇರಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಿಂಗಾರಿ ಜೋಳ ಖರೀದಿ ಕೇಂದ್ರವನ್ನು ಈಗಾಗಲೇ ಆರಂಭಿಸಲಾಗಿದೆ. ಪ್ರತಿ ಕ್ವಿಂಟಲ್‌ಗೆ ₹3371 ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ಪ್ರತಿ ರೈತರಿಗೆ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್‌ ಜೋಳ ಖರೀದಿ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ ಎಲ್ಲ ತಾಲೂಕು ಕೇಂದ್ರಗಳಿಂದ ಒಟ್ಟು 667 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ನೋಂದಾಯಿತ ರೈತರಲ್ಲಿ 50 ರೈತರು ತಾವು ಬೆಳೆದ ಜೋಳವನ್ನು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ್ದು, ಇದರಿಂದ 1921 ಕ್ವಿಂಟಲ್‌ ಜೋಳ ಸಂಗ್ರಹಣೆ ಮಾಡಲಾಗಿದೆ ಎಂದರು.

ರೈತರು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಬಂದ ಜೋಳವನ್ನು ಸರಿಯಾದ ತೂಕದೊಂದಿಗೆ ಹಾಗೂ ಸರಿಯಾದ ಚೀಲದಲ್ಲಿ ಸಂಗ್ರಹಿಸಿಡಲು ತಿಳಿಸಿದರು. ಖರೀದಿ ಕೇಂದ್ರದ ಸಿಬ್ಬಂದಿ ಲೆಕ್ಕ ಪತ್ರ ನಿರ್ವಹಣೆ ಹಾಗೂ ದಾಸ್ತಾನುಗಳ ನಿರ್ವಹಣೆಯನ್ನು ಸರಿಯಾಗಿ ಮಾಡುವಂತೆ ಸಲಹೆ ನೀಡಿದರು.

ಬಳಿಕ ರೈತರೊಂದಿಗೆ ಮಾತನಾಡಿ, ತಾವು ಬೆಳೆದ ಜೋಳವನ್ನು ನೇರವಾಗಿ ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಬೇಕು. ಜೋಳ ಖರೀದಿಗೆ ಬೆಂಬಲ ಬೆಲೆ ನಿಗದಿಪಡಿಸಿದ್ದು, ಅದರ ಪ್ರಕಾರವಾಗಿ ಜೋಳ ಖರೀದಿ ಮಾಡಲಾಗುವುದು. ಈ ಕುರಿತು ಸಮಸ್ಯೆಗಳೇನಾದರೂ ಇದ್ದರೆ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತನ್ನಿ. ಅವುಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ರೈತರಿಗೆ ತಿಳಿಸಿದರು.