ಕನ್ನಡಪ್ರಭ ವಾರ್ತೆ, ತುಮಕೂರು

ಹೇಮಾವತಿ ನೀರು ಶೇಖರಣಾ ಘಟಕವಾಗಿರುವ ಹಾಗೂ ತುಮಕೂರು ನಗರದ ಕುಡಿಯುವ ನೀರಿನ ಮೂಲವಾಗಿರುವ ಬುಗಡನಹಳ್ಳಿ ಕೆರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ನೀರು ಸಂಗ್ರಹಣೆಯ ಪ್ರಮಾಣವನ್ನು ಪರಿಶೀಲಿಸಿದರು.

ಇತ್ತೀಚಿನ ದಿನಗಳಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುಸಿತದ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪಂಪ್ ಹೌಸ್‌ನ ಕರ‍್ಯನರ‍್ವಹಣೆ ಹಾಗೂ ಪಂಪ್ ಸಾಮರ್ಥ್ಯ ಕುರಿತು ವಿವರವಾಗಿ ಅವಲೋಕಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಗ್ರಹಣಾ ವ್ಯವಸ್ಥೆಯಲ್ಲಿ ಪ್ರತಿ ದಿನಕ್ಕೆ ಗರಿಷ್ಠ 75 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, ಬುಗುಡನಹಳ್ಳಿ ಕೆರೆಯಿಂದ ತುಮಕೂರು ನಗರಕ್ಕೆ 54 ಎಂಎಲ್‌ಡಿ ನೀರನ್ನು ಒದಗಿಸಲಾಗುತ್ತಿದ್ದು, ಉಳಿದಂತೆ 21 ಎಂಎಲ್ ಡಿ ಪ್ರಮಾಣದ ನೀರನ್ನು ತುಮಕೂರು ನಗರದಲ್ಲಿರುವ ಕೊಳವೆ ಬಾವಿಗಳ ಮೂಲಕ ವ್ಯವಸ್ಥೆ ಮಾಡಲಾಗುತ್ತಿದೆ.

ಒಟ್ಟು ೩೬೩ ಎಂಸಿಎಫ್ ಟಿ ಸಾಮರ್ಥ್ಯದೊಳಗೆ ಪ್ರಸ್ತುತ 100 ಎಂಸಿಎಫ್ ಟಿ ನೀರು ಲಭ್ಯವಿದೆ. ಇದರಲ್ಲಿ 10 ಎಂಸಿಎಫ್ ಟಿ ಡೆಡ್ ಸ್ಟೋರೇಜ್ ಆಗಿರುವುದರಿಂದ ಬಳಸಲು ಸಾಧ್ಯವಿಲ್ಲ. ಇನ್ನೂ ಸುಮಾರು 10 ಎಂಸಿಎಫ್ ಟಿ ನೀರು ಆವಿಯಾಗಿ ನಷ್ಟವಾಗುವ ಸಾಧ್ಯತೆ ಇದೆ. ಉಳಿದ 80 ಎಂಸಿಎಫ್ ಟಿ ನೀರನ್ನು ಪಂಪ್ ಮಾಡುವ ಮೂಲಕ ಬಳಸಲಾಗುವುದು ಎಂದು ತಿಳಿಸಿದರು.ಇದಲ್ಲದೆ ಸ್ವಚ್ಛತೆ, ನೀರಿನ ಮಟ್ಟ ಹಾಗೂ ಇತರೆ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಯಿತು. ಸ್ಥಳದಲ್ಲಿದ್ದ ಎಂಜಿನಿಯರ್ ನೀಡಿದ ಮಾಹಿತಿಯ ಪ್ರಕಾರ ಪ್ರಸ್ತುತ ನೀರು 35 ರಿಂದ 40 ದಿನಗಳವರೆಗೆ ಸಾಕಾಗಲಿದೆ. ಈಗಾಗಲೇ ಹೇಮಾವತಿ ನಾಲವಲಯದ ಮುಖ್ಯ ಇಂಜಿನಿಯರ್ ಅವರಿಗೆ ಪತ್ರ ಬರೆಯಲಾಗಿದ್ದು ಇನ್ನೂ ತುಮಕೂರು ಜಿಲ್ಲೆಗೆ ಬಿಡುಗಡೆ ಬಾಕಿ ಇರುವ ನೀರಿನ ಪಾಲನ್ನು ತಕ್ಷಣ ಬಿಡುಗಡೆ ಮಾಡಲು ಕೋರಲಾಗಿದೆ ಎಂದರು. ಹೇಮಾವತಿ ನಾಲಾವಲಯ ಕಾರ್ಯಪಾಲಕ ಎಂಜಿನಿಯರ್, ತುಮಕೂರು ಮಹಾನಗರ ಪಾಲಿಕೆ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.