ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕು ಮಹಾರಾಜಪೇಟೆ ಜವಾಹರ ನವೋದಯ ವಿದ್ಯಾಲಯಕ್ಕೆ ಗುರುವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾವೇರಿ:ಜಿಲ್ಲೆಯ ಹಾನಗಲ್ಲ ತಾಲೂಕು ಮಹಾರಾಜಪೇಟೆ ಜವಾಹರ ನವೋದಯ ವಿದ್ಯಾಲಯಕ್ಕೆ ಗುರುವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾಲಯದ ಆಡಳಿತ ಸಮಿತಿ ಸಭೆ ಹಾಗೂ ಪ್ರವೇಶ ಪರೀಕ್ಷೆ ಪೂರ್ವಭಾವಿ ಸಭೆ ನಡೆಸಿದ ಅವರು, ವಿದ್ಯಾರ್ಥಿಗಳಿಗೆ ಓದು, ವಸತಿ ಹಾಗೂ ಆಹಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.ವಿದ್ಯಾಲಯದ ತರಗತಿ ಕೊಠಡಿಗಳಿಗೆ, ಪ್ರಯೋಗಾಲಯ, ಗ್ರಂಥಾಲಯ, ವಸತಿ ಕಟ್ಟಡ, ಶೌಚಾಲಯ ಪರಿಶೀಲಿಸಿದ ಅವರು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.
ಆನಂತರ ವಿದ್ಯಾರ್ಥಿಗಳಿಗೆ ಊಟದ ಹಾಲ್‌ಗೆ ತೆರಳಿದ ಅವರು, ಅಡುಗೆ ಕೋಣೆ, ಆಹಾರ ಸಂಸ್ಕರಣೆ ಕೊಠಡಿ ಪರಿಶೀಲಿಸಿದರು. ಶುಚಿಯಾಗಿ ಹಾಗೂ ರುಚಿಯಾಗಿ ಅಡುಗೆ ತಯಾರಿಸಬೇಕು ಎಂದು ಸೂಚನೆ ನೀಡಿದರು.ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದ ಜಿಲ್ಲಾಧಿಕಾರಿ, ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.
ಬಳಿಕ 11 ಮತ್ತು 12ನೇ ತರಗತಿಗೆ ಕೊಠಡಿ ಕೊರತೆ ಇರುವುದನ್ನು ನಿವೇದಿಸಲಾಯಿತು. ಕಟ್ಟಡಕ್ಕೆ ಬೇಕಾದ ಯೋಜನೆ ತಯಾರಿಸಿ ಕಳುಹಿಸಿಕೊಡಲು ಜಿಲ್ಲಾಧಿಕಾರಿ ಸೂಚಿಸಿದರು.ವಿದ್ಯಾರ್ಥಿಗಳಿಗೆ ಕುಡಿಯುವ ನೀರನ ಕೊರತೆ ನೀಗಿಸಲು, ವಿದ್ಯಾಲಯಕ್ಕೆ 10 ಸೋಲಾರ್ ಬೀದಿದೀಪಗಳನ್ನು ಅಳವಡಿಸಲು ಸಂಬಂಧಪಟ್ಟವರಿಗೆ ಸೂಚಿಸಿದರು.
ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ ನಡೆಸಲು ಅನುಕೂಲವಾಗುವಂತೆ ವಿದ್ಯುತ್ ಸಂಪರ್ಕದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹುಬ್ಬಳ್ಳಿ ಹಾನಗಲ್ ವಿಭಾಗದ ಎಲ್ಲ ಸಾರಿಗೆ ಬಸ್ಸುಗಳ ನಿಲುಗಡೆ ಮಾಡುವಂತೆ ಸಾರಿಗೆ ಸಂಸ್ಥೆಯ ಘಟಕದ ಅಧಿಕಾರಿಗಳಿಗೆ ಸೂಚಿಸಿದರು.ನವೋದಯ ಪೂರ್ವಭಾವಿ ತರಬೇತಿ ಸಭೆಯಲ್ಲಿ, ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ಸೆಂಟ್ರಲ್ ಲೆವೆಲ್ ಅಬ್ಸರ್ವರ್‌ಗಳಿಗೆ ಸೂಚಿಸಿದರು. ವಿದ್ಯಾಲಯದ ಪ್ರಗತಿಗಾಗಿ ಪಾಲಕ, ಶಿಕ್ಷಕ ಸಂಘದ ಸದಸ್ಯರು ಹಾಗೂ ಉನ್ನತ ಸ್ಥಾನದಲ್ಲಿರುವ ಈ ವಿದ್ಯಾಲಯದ ಹಳೆ ವಿದ್ಯಾರ್ಥಿಗಳು ವಿದ್ಯಾಲಯದ ಸರ್ವಾಂಗೀಣ ಪ್ರಗತಿಗಾಗಿ ತಮ್ಮ ಸಹಾಯಹಸ್ತ ನೀಡಬೇಕು ಎಂದು ಮನವಿ ಮಾಡಿದರು.