ಜಿಲ್ಲಾಧಿಕಾರಿಯದು ಕಾಂಗ್ರೆಸ್‌ ಕಚೇರಿಯಾಗಿ ಕರ್ತವ್ಯ: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಕ್ರೋಶ

| Published : Feb 27 2024, 01:35 AM IST

ಜಿಲ್ಲಾಧಿಕಾರಿಯದು ಕಾಂಗ್ರೆಸ್‌ ಕಚೇರಿಯಾಗಿ ಕರ್ತವ್ಯ: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲಾಧಿಕಾರಿ ಕಚೇರಿಯು ಕಾಂಗ್ರೆಸ್ ಕಚೇರಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಹೊಳೆನರಸೀಪುರದಲ್ಲಿ ಮಾತನಾಡಿದರು.

ಬೃಹತ್ ಆರೋಗ್ಯ ಶಿಬಿರ, ರಕ್ತದಾನ ಶಿಬಿರಕ್ಕೆ ಚಾಲನೆ । ಜನರಿಗೆ ಮಾತ್ರೆ ವಿತರಣೆಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಬೆಳಿಗ್ಗೆಯಿಂದ ರಾತ್ರಿ ೧೦ ಗಂಟೆಯ ತನಕ ವಿನಾಕಾರಣ ಅಧಿಕಾರಿಗಳ ಸಭೆ ಆಯೋಜನೆ ಮಾಡುವ ಮೂಲಕ ಗ್ರಾಮೀಣ ಜನರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ. ಹಾಸನ ಜಿಲ್ಲಾಧಿಕಾರಿ ಕಚೇರಿಯು ಕಾಂಗ್ರೆಸ್ ಕಚೇರಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜನೆ ಮಾಡಿದ್ದ ಬೃಹತ್ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವಿಧ ಇಲಾಖೆಗಳ, ಹಾಸನ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಿಂದ ಸಾಕಷ್ಟು ನುರಿತ ವೈದ್ಯರು ಆಗಮಿಸಿದ್ದು ಇವರ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರವನ್ನು ನಡೆಸಲಾಗುತ್ತಿದೆ. ಈ ಶಿಬಿರದಲ್ಲಿ ನುರಿತ ವೈದ್ಯರ ತಂಡ ಬಂದಿದ್ದು, ಅವರಿಂದ ತಪಾಸಣೆ ಮಾಡಿಸಿಕೊಂಡು, ಸಾರ್ವಜನಿಕರು ಅರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಸಾರ್ವಜನಿಕರ ತೆರಿಗೆ ಹಣದ ಸಂಬಳ ಪಡೆಯುತ್ತಿರುವ ಜಿಲ್ಲಾಧಿಕಾರಿ, ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜಿಲ್ಲೆಯಲ್ಲಿನ ಅಧಿಕಾರಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ಕೆಲಸ ಮಾಡುವುದಲ್ಲ. ಕಳೆದ ೯ ತಿಂಗಳಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗುತ್ತಿಲ್ಲ, ಕೊನೆ ಪಕ್ಷ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾಧಿಕಾರಿಗಳೇ ನೀವು ಒಂದು ಪಕ್ಷದ ಅಧಿಕಾರಿಯೆಂದು ಹೇಳಿಬಿಡಿ, ಆಗ ನಾವು ನಿಮ್ಮಲ್ಲಿಗೆ ಬರುವ ಕೆಲಸ ತಪ್ಪುತ್ತದೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯಾವುದೇ ಜನರ ಕೆಲಸ ಆಗುತ್ತಿಲ್ಲ, ಆದರೆ ನಿತ್ಯ ಜಿಲ್ಲೆಯಲ್ಲಿನ ಎಲ್ಲ ಅಧಿಕಾರಿಗಳನ್ನು ಒಂದಡೆ ಸೇರಿಸಿ ಮೀಟಿಂಗ್ ಮಾಡುತ್ತಿದ್ದಾರೆ, ಇದೇ ರೀತಿ ವಾರಗಟ್ಟಲೆ ಮೀಟಿಂಗ್ ಹೆಸರಿನಲ್ಲಿ ಕಾಲ ತಳ್ಳುತ್ತ ಇದ್ದರೆ ಸಾರ್ವಜನಿಕರ ಕೆಲಸಗಳ ಕತೆ ಏನು’ ಎಂದು ಪ್ರಶ್ನಿಸಿದರು.

‘ಶಿಕ್ಷಣ ಬಡವರು, ಮಧ್ಯಮ ವರ್ಗದವರ ಪಾಲಿಗೆ ಬಿಸಿ ತುಪ್ಪವಾಗಿದೆ, ನಮಗೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಸಹ ಅಧಿಕಾರಕ್ಕೆ ಬಂದ ಸರ್ಕಾರಗಳು ಶಿಕ್ಷಣವನ್ನು ಎಲ್ಲರಿಗೂ ದೊರೆಯುವಂತೆ ಮಾಡುವಲ್ಲಿ ವಿಫಲವಾಗಿವೆ. ನಾನು ಜಿಲ್ಲಾ ಸಚಿವನಾಗಿದ್ದ ಅವಧಿಯಲ್ಲಿ ಜಿಲ್ಲೆಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರ ಫಲದಿಂದ ಇಂದು ಒಳ್ಳೆಯ ಶಿಕ್ಷಣ ನೀಡಲು ಸಾದ್ಯವಾಗಿದೆ’ ಎಂದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ.ಧನಶೇಖರ್, ಶಾಸಕ ರೇವಣ್ಣ ಸಾರ್ವಜನಿಕ ಆಸ್ಪತ್ರೆಯನ್ನು ೨೫೦ ಹಾಸಿಗೆಗಳ, ಐದು ಡಯಾಲಿಸಿಸ್ ಯಂತ್ರಗಳು ಹಾಗೂ ೧೬೦ ಬೆಡ್ ಆಕ್ಸಿಜನ್ ಹಾಸಿಗೆಗಳ ಸೌಲಭ್ಯಗಳ ಜತೆಗೆ ೨೫ ನುರಿತ ವೈದ್ಯರ ತಂಡವನ್ನು ನೀಡಿದ್ದಾರೆ. ೩ ಕೋಟಿ ರು.ಗೂ ಹೆಚ್ಚು ಮೌಲ್ಯದ ಸಿಟಿ ಸ್ಕ್ಯಾನ್ ಸೌಲಭ್ಯ ಕಲ್ಪಿಸುವ ಮೂಲಕ ಬಡವರಿಗೆ ಉನ್ನತ ಶ್ರೇಣಿಯ ಚಿಕಿತ್ಸೆಯ ಸೌಲಭ್ಯ ದೊರಕಿಸಿಕೊಟ್ಟಿದ್ದಾರೆ ಎಂದು ಪ್ರಶಂಶಿಸಿದರು. .

ತಾಲೂಕು ಪಂ. ಅಧಿಕಾರಿ ಕುಸುಮಶೇರ್, ತಾಲೂಕು ವೈದ್ಯಾಧಿಕಾರಿ ಡಾ.ರಾಜೇಶ್, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಬಿಇಒ ಸೋಮಲಿಂಗೇಗೌಡ, ತಾ.ಪಂ.ತಾಂತ್ರಿಕ ಅಧಿಕಾರಿ ಗೋಪಾಲ್, ಸಿಡಿಪಿಒ ಜ್ಯೋತಿ, ಹಾಸನ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರಾದ ಧರ್ಮೇಂದ್ರ, ಆಧಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರಾದ ಸೋಮಶೇಖರ್ ಹಾಗೂ ಶಿವಕುಮಾರ್ ಇದ್ದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಧನಶೇಖರ್ ಒಟ್ಟು ೩೦೬೭ ಜನರು ಹೆಸರು ನೋಂದಾಯಿಸಿಕೊಂಡು ಚಿಕಿತ್ಸೆ ಪಡೆದಿದ್ದಾರೆ, ಬಿಪಿ ೨೮೩೭, ಶುಗರ್ ೧೭೪೦, ಎಕ್ಸ್‌ರೇ೧೪೭, ರಕ್ತ ಪರೀಕ್ಷೆ ೧೩೭೮, ಇತರೆ ವೈದ್ಯಕೀಯ ಸೌಲಭ್ಯ ಜತೆಗೆ ಉಚಿತ ಔಷಧಿ ಪಡೆದಿದ್ದಾರೆ. ೩೫ ದಾನಿಗಳು ರಕ್ತದಾನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಶಿಬಿರ, ರಕ್ತದಾನ ಶಿಬಿರವನ್ನು ಶಾಸಕ ರೇವಣ್ಣ ಉದ್ಘಾಟಿಸಿ, ಜನರಿಗೆ ಮಾತ್ರೆ ವಿತರಿಸಿದರು.