ಕನ್ನಡಪ್ರಭ ವಾರ್ತೆ ಮೈಸೂರು

ಬಿಸಿಯೂಟ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ರಾಜ್ಯದಲ್ಲಿ ಈಗಾಗಲೇ ಭರವಸೆ ನೀಡಿರುವಂತೆ ಈ ಬಾರಿಯ ಬಜೆಟ್‌ ನಲ್ಲಿ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ (ಎಐಯುಟಿಯುಸಿ ಸಂಯೋಜಿತ) ಜಿಲ್ಲಾ ಸಮಿತಿಯವರು ಜಿಪಂ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಅಪೌಷ್ಟಿಕತೆ ನೀಗಿಸಲು, ಮಕ್ಕಳು ವಿದ್ಯಾಭ್ಯಾಸ ಹೊಂದಲು ಅವಕಾಶ ಮಾಡಿಕೊಟ್ಟಿರುವ ಅಕ್ಷರ ದಾಸೋಹ ಯೋಜನೆ ಯಶಸ್ಸಿಗೆ ಬಿಸಿಯೂಟ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ಆದರೆ, ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾಲಿಸುತ್ತಿರುವ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳಿಂದಾಗಿ ಇಂತಹ ಮಹತ್ವಾಕಾಂಕ್ಷಿತ ಯೋಜನೆಯನ್ನು ದೊಡ್ಡ ದೊಡ್ಡ ಸರ್ಕಾರೇತರ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಸೇವೆಯ ಹೆಸರಿನಲ್ಲಿ ನೀಡುವ ಮೂಲಕ ಖಾಸಗೀಕರಣ ಮಾಡಿ, ಮಕ್ಕಳ ಭವಿಷ್ಯ ರೂಪಿಸುತ್ತಿದ್ದ ಬಿಸಿಯೂಟ ಕಾರ್ಯಕರ್ತೆಯರ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಕಿಡಿಕಾರಿದರು.ಯಾವುದೇ ಯೋಜನೆಗಳು ಫಲಕಾರಿಯಾಗಬೇಕೆಂದರೆ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕು ಹಸನಾಗಿರಬೇಕು. ಆದರೆ, ಬಿಸಿಯೂಟ ಯೋಜನೆಯಡಿ ಕೆಲಸ ಮಾಡುವ ಅಡುಗೆ ಕಾರ್ಮಿಕರ ಗೌರವಧನ ಅತ್ಯಂತ ಕಡಿಮೆಯಾಗಿದೆ. ಮಾಸಿಕ 4600- 4700 ರೂ. ಪಡೆದು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಅವರು ಆರೋಪಿಸಿದರು.ಇದೀಗ ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಭವಿಷ್ಯದ ಅಭದ್ರತೆ ಕಾಡುತ್ತಿದೆ. ಹೀಗಾಗಿ, ಕೂಡಲೇ ಸರ್ಕಾರ ಕೆಲಸ ಭದ್ರತೆ ನೀಡಿ, ಈ ಬಾರಿಯ ಬಜೆಟ್‌ ನಲ್ಲಿ ಗೌರವಧನ ಹೆಚ್ಚಳ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಹಕ್ಕೊತ್ತಾಯಗಳುರಾಜ್ಯದಲ್ಲಿ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಅಡುಗೆಯವರಿಗೆ ಕನಿಷ್ಠ ವೇತನವಿದ್ದು ಅದರಂತೆ ಬಿಸಿ ಊಟ ಕಾರ್ಮಿಕರಿಗೂ ಕನಿಷ್ಠ ವೇತನ ಜಾರಿ ಮಾಡಬೇಕು. ಈ ಬಾರಿಯ ಬಜೆಟ್‌ ನಲ್ಲಿ ಗೌರವ ಧನ ಹೆಚ್ಚಿಸಬೇಕು. ಮಾಸಿಕ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಪಾವತಿಸಬೇಕು. ಸುರಕ್ಷಿತ ನಿವೃತ್ತಿ ಬದುಕು ಖಾತ್ರಿ ಪಡಿಸುವುದಕ್ಕಾಗಿ ನಿವೃತ್ತಿ ವೇತನಕ್ಕೆ ಒಳಪಡಿಸಿ, ಅಲ್ಲಿಯವರೆಗೆ 5 ಲಕ್ಷ ಇಡಿಗಂಟು ನೀಡಬೇಕು ಎಂದು ಅವರು ಆಗ್ರಹಿಸಿದರು.ಜೀವ ವಿಮೆಗೆ ಒಳಪಡಿಸಿ ಇಲಾಖೆಯಿಂದ ಪ್ರೀಮಿಯಂ ಪಾವತಿಸಬೇಕು. ಹತ್ತಿ ಬಟ್ಟೆಯ ಸಮವಸ್ತ್ರ ಹಾಗೂ ಕೈಗವಸು, ತಲೆಯ ಸ್ಕಾರ್ಫ್, ಏಪ್ರಾನ್‌ ಗಳನ್ನು ನೀಡಬೇಕು. ಬಿಸಿಯೂಟ ಕಾರ್ಮಿಕರಿಗೆ 10 ತಿಂಗಳ ಬದಲಾಗಿ 12 ತಿಂಗಳು ಗೌರವಧನ ನೀಡಬೇಕು. ಬಿಸಿಯೂಟ ಕಾರ್ಮಿಕರನ್ನು ಕಾಯಂಗೊಳಿಸಿ, ಸೇವಾ ಭದ್ರತೆ ಒದಗಿಸಬೇಕು. ಬಿಸಿಯೂಟ ಕಾರ್ಮಿಕರಿಗೆ ಮೊಟ್ಟೆ ಕುದಿಸಿ, ಸಿಪ್ಪೆ ಸುಲಿದ ಹಣವನ್ನು ಪ್ರತಿ ತಿಂಗಳು ಅವರ ಖಾತೆಗೆ ಜಮಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಸಂಘದ ಪದಾಧಿಕಾರಿಗಳಾದ ಪಿ.ಎಸ್. ಸಂಧ್ಯಾ, ಕೆ.ವಿ. ಉಮಾ, ರಾಜೇಶ್ವರಿ, ಮಹದೇವಮ್ಮ, ಮಾಲಮ್ಮ, ಸೌಮ್ಯಾ, ರಾಜಮ್ಮ ಮೊದಲಾದವರು ಇದ್ದರು.