ಸಾರಾಂಶ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಆದೇಶಕ್ಕೆ ಖಂಡನೆ । ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಪ್ರಾಸಿಕ್ಯೂಷನ್‌ಗೆ ಆದೇಶ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಹೊರಟು ಭುವನೇಶ್ವರಿ ವೃತ್ತದಲ್ಲಿ ಪ್ರತಿಭನೆ ನಡೆಸಿ, ರಾಜ್ಯಪಾಲರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ರಾಜ್ಯಪಾಲರ ವಿರುದ್ದ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಾತನಾಡಿ, ಸಿದ್ದರಾಮಯ್ಯನವರ ವಿರುದ್ದ ಬಿಜೆಪಿ ಮತ್ತು ಜೆಡಿಎಸ್ ಷಡ್ಯಂತ್ರ ರೂಪಿಸಿವೆ. ಇದಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡಿ, ರಾಜಭವನವನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಆರೋಪಿಸಿದರು.
ರಾಜ್ಯಪಾಲರು ಕೇಂದ್ರದ ಕ್ಯಗೊಂಬೆಯಾಗಿ ಜನರಿಂದ ಆಯ್ಕೆಯಾಗಿರುವ ಸರ್ಕಾರವನ್ನು ಬೀಳಿಸುವ ಹುನ್ನಾರ ನಡೆಸಿದ್ದಾರೆ, ಆದರೆ ನಾವು ಯಾವುದೇ ಕಾರಣಕ್ಕೂ ಬಗ್ಗವುದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ, ಇಡೀ ಕಾಂಗ್ರೆಸ್ ಪಕ್ಷ, ಮಂತ್ರಿ ಮಂಡಲ ಶಾಸಕರು, ಸಂಸದರು ಸಿದ್ದರಾಮಯ್ಯನವರ ಜೊತೆಗಿದ್ದೇವೆ, ರಾಜ್ಯಪಾಲರು ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಎಚ್.ಡಿ.ಕುಮಾರಸ್ವಾಮಿ, ಮೃರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ತಿಂಗಳುಗಲೇ ಕಳೆದಿವೆ. ಆದರೆ ರಾಜ್ಯಪಾಲರು ಅವುಗಳಿಗೆ ಆದೇಶ ನೀಡದೇ ಯಾರೋ ಆರ್‌ಟಿಐ ಕಾರ್ಯಕರ್ತ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟ ತಕ್ಷಣ ವಿವೇಚನೆ ಮಾಡದೇ ನೋಟಿಸ್ ನೀಡಿ ಈಗ ಪ್ರಾಸಿಕ್ಯೂಷನ್‌ಗೆ ಆದೇಶ ನೀಡಿರುವುದು ದುರುದ್ದೇಶಪೂರಕ ಆಗಿದೆ ಎಂದರು.
ಗ್ಯಾರಂಟಿಗಳ ಮೂಲಕ ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಏಳಿಗೆ ಸಹಿಸದೇ , ಬಿಜೆಪಿ ಮತ್ತು ಜೆಡಿಎಸ್ ಷಡ್ಯಂತ್ರ ರೂಪಿಸಿವೆ, ರಾಜ್ಯಪಾಲರು ತಮ್ಮ ಆದೇಶವನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ಕಾಂಗ್ರೆಸ್ ನಿರಂತರವಾದ ತೀವ್ರ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಗಣೇಶ್‌ಪ್ರಸಾದ್, ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕ ಆರ್.ನರೇಂದ್ರ, ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕ ಎಸ್. ಜಯಣ್ಣ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು, ವಿವಿದ ಘಟಕದ ಆಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.