ಮಳೆ ಹಾನಿ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ-

| Published : May 21 2025, 02:20 AM IST

ಮಳೆ ಹಾನಿ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ-
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ವಾರದಲ್ಲಿ ಬೆಳೆ ಹಾನಿ ಕುರಿತು ವರದಿಯನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೀಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮಳೆಗಾಲ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಮಳೆಯಿಂದ ಆಗುವ ಹಾನಿ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.

ತಮ್ಮ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ತಹಸೀಲ್ದಾರ್ ಗಳು ತಮ್ಮ ಹಂತದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಳೆಯಿಂದ ಬೆಳೆ ಹಾನಿ ಉಂಟಾದರೇ ಒಂದು ವಾರದಲ್ಲಿ ಬೆಳೆ ಹಾನಿ ಕುರಿತು ವರದಿಯನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೀಡಬೇಕು ಎಂದು ತಿಳಿಸಿದರು.

ಮನೆ ಹಾನಿ ಸಂಬಂಧ ವಾಸ್ತವಾಂಶ ಆಧಾರದ ಮೇಲೆ ಸಮರ್ಪಕವಾಗಿ ವರದಿ ನೀಡಿ, ಅದಕ್ಕೆ ಪರಿಹಾರ ನೀಡಲು ಪಿಡಿ ಖಾತೆಯಲ್ಲಿ ಹಣವಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಪ್ರಾಣ ಹಾನಿ- 24 ಗಂಟೆಯೊಳಗೆ ಪರಿಹಾರ

ಮಳೆಗಾಲದಲ್ಲಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳು ಹೆಚ್ಚು. ಈ ಬಗ್ಗೆ ಸೆಸ್ಕ್ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ವಿದ್ಯುತ್ ನಲ್ಲಿ ಅಡಚಣೆ ಆದರೆ ತಕ್ಷಣ ರಿಪೇರಿ ಮಾಡಿ ವಿದ್ಯುತ್ ಪೂರೈಕೆ ಮಾಡಬೇಕು. ಎಚ್.ಡಿ. ಕೋಟೆ, ಸರಗೂರು, ನಂಜನಗೂಡು ಹಾಗೂ ಟಿ. ನರಸೀಪುರ ತಾಲೂಕುಗಳಲ್ಲಿ ಹೆಚ್ಚು ಹಾನಿ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಮಳೆಯಿಂದ ಯಾವುದೇ ಪ್ರಾಣ ಹಾನಿ ಆದರೆ 24 ಗಂಟೆಯೊಳಗೆ ಕುಟುಂಬಸ್ಥರಿಗೆ ಪರಿಹಾರ ತಲುಪಬೇಕೆಂದು ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಎಚ್.ಡಿ. ಕೋಟೆ ಹಾಗೂ ಸರಗೂರು ಭಾಗದಲ್ಲಿ ಕೆಲವು ಸೇತುವೆಗಳು ಮುಳುಗುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಜೆಸಿಬಿ ವ್ಯವಸ್ಥೆ ಮಾಡಿ ಇಟ್ಟುಕೊಳ್ಳಬೇಕು. ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳು ಬೀಳುವ ಹಂತದಲ್ಲಿ ಇದ್ದರೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪೋಟೋ ದಾಖಲಾತಿ ಇಟ್ಟುಕೊಂಡು ತೆರವುಗೊಳಿಸಲು ಅಧಿಕಾರಿಗಳು ಕ್ರಮ ವಹಿಸಿ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು, ಡೆಂಘೀ, ಚಿಕೂನ್ ಗುನ್ಯಾ ಹರಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಅರಿವು ಮೂಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಕೈಗೊಳ್ಳಿ ಎಂದು ಅವರು ತಿಳಿಸಿದರು.

ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸೀಫ್, ಡಿಸಿಪಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮೊದಲಾದವರು ಇದ್ದರು.

----

ಕೋಟ್...

ಪ್ರವಾಹ- ಪೂರ್ವಸಿದ್ಧತೆ ಮಾಡಿಕೊಳ್ಳಿ

ಕಬಿನಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚಿನ ಪ್ರವಾಹ ಬರುವ ಸಾಧ್ಯತೆಗಳು ಹೆಚ್ಚು. ಕಳೆದ ಬಾರಿ ಯಾವ ಯಾವ ಗ್ರಾಮಗಳಲ್ಲಿ ಹೆಚ್ಚಿನ ಹಾನಿ ಆಗಿತ್ತು, ಆ ಗ್ರಾಮಗಳ ಬಗ್ಗೆ ಹೆಚ್ಚು ಗಮನಹರಿಸಿ. ಟಿ. ನರಸೀಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರವಾಹ ಬರುವ ಸಾಧ್ಯತೆಗಳು ಇರುತ್ತವೆ. ಈ ಗ್ರಾಮಗಳಲ್ಲಿ ಪ್ರವಾಹ ಬಂದರೆ ಜನರ ಸ್ಥಳಾಂತರ, ಗಂಜಿ ಕೇಂದ್ರಗಳ ತೆರೆಯುವ ಕುರಿತು ಪೂರ್ವಸಿದ್ಧತೆ ಮಾಡಿಕೊಳ್ಳಿ.

- ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ