ಪಂಪ್ಡ್‌ ಸ್ಟೋರೇಜ್‌ ವಿರೋಧಿಸಿ ಜಿಲ್ಲಾ ರೈತ ಸಂಘ ಅಣಕು ಶವಯಾತ್ರೆ

| Published : Oct 16 2025, 02:00 AM IST

ಪಂಪ್ಡ್‌ ಸ್ಟೋರೇಜ್‌ ವಿರೋಧಿಸಿ ಜಿಲ್ಲಾ ರೈತ ಸಂಘ ಅಣಕು ಶವಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಜಿಲ್ಲಾ ರೈತ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿಯ ಪ್ರತಿಭಟನೆಯಲ್ಲಿ ಬುಧವಾರ ಯೋಜನೆಯ ಅಣಕು ಶವವನ್ನು ದಹಿಸಿ ಯೋಜನೆ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಜಿಲ್ಲಾ ರೈತ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿಯ ಪ್ರತಿಭಟನೆಯಲ್ಲಿ ಬುಧವಾರ ಯೋಜನೆಯ ಅಣಕು ಶವವನ್ನು ದಹಿಸಿ ಯೋಜನೆ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

ಕಳೆದ ೧೨ ದಿನಗಳಿಂದ ಅಣಕು ಶವವನ್ನು ಎದುರು ಇರಿಸಿಕೊಂಡು ಪ್ರತಿಭಟನೆ ನಡೆಯುತ್ತಿತ್ತು. ಬುಧವಾರ ಪ್ರತಿಭಟನಾ ಸ್ಥಳಕ್ಕೆ ಆನಂದಪುರ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಆಗಮಿಸಿ ಸಹಿ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ನಂತರ ಅಣಕು ಶವಕ್ಕೆ ಮಾಜಿ ಸಚಿವ ಎಚ್.ಹಾಲಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಸಂಘದ ಪ್ರಮುಖರು ಹೆಗಲು ಕೊಟ್ಟರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಣಕು ಶವಯಾತ್ರೆ ನಡೆದು, ಅಂತಿಮವಾಗಿ ನಗರಸಭೆ ಆವರಣದಲ್ಲಿ ದಹನ ಮಾಡಲಾಯಿತು.

ಈ ಸಂದರ್ಭ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಪಂಪ್ಡ್ ಸ್ಟೋರೇಜ್ ದುಬಾರಿ ಮತ್ತು ಲಾಭದಾಯಕವಲ್ಲದ ಯೋಜನೆಯಾಗಿದೆ. ಎರಡೂವರೆ ಸಾವಿರ ಮೆ.ವ್ಯಾ. ವಿದ್ಯುತ್ ವಿನಿಯೋಗಿಸಿ, ಎರಡು ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಅತ್ಯಂತ ಅವೈಜ್ಞಾನಿಕ ಯೋಜನೆ ಇದಾಗಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಪರಿಸರ ನಾಶವಾಗುವ ಜತೆಗೆ ಕಾಡುಪ್ರಾಣಿ, ಜೀವವೈವಿಧ್ಯ, ಅರಣ್ಯ, ಪರಿಸರ ನಾಶವಾಗುತ್ತದೆ. ಹಿಂದೆ ಯೋಜನೆ ಕೈಗೆತ್ತಿಕೊಂಡಿದ್ದಾಗ ನಾವೆಲ್ಲಾ ಮಠಾಧೀಶರು ವಿರೋಧ ಮಾಡಿದ್ದೇವೆ. ಇದೀಗ ಮತ್ತೆ ಯೋಜನೆ ಪ್ರಸ್ತಾಪವಾಗುತ್ತಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಇಂತಹ ಪರಿಸರ ವಿರೋಧಿ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ನಾನು ಶಾಸಕನಾಗಿದ್ದಾಗ ಯೋಜನೆ ಪ್ರಸ್ತಾಪವಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ, ವನ್ಯಸಂಪತ್ತು ನಾಶವಾಗುವ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೇಳಿ ಯೋಜನೆ ಕೈಬಿಡುವಂತೆ ಮಾಡಲಾಗಿತ್ತು. ಈಗಿನ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಯೋಜನೆ ಪರ ಮಾತನಾಡಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಸುಮಾರು ನಾಲ್ಕು ಸಾವಿರ ಎಕರೆ ಅರಣ್ಯ ನಾಶವಾಗುತ್ತದೆ. ಕೆಪಿಟಿಸಿಎಲ್ ಅಧಿಕಾರಿಗಳು ವಾಸ್ತವಾಂಶ ಮುಚ್ಚಿಟ್ಟು ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಗುಡ್ಡವನ್ನು ಕೊರೆದು ಸುರಂಗ ಮಾರ್ಗ ನಿರ್ಮಿಸುವ ಉದ್ದೇಶವನ್ನು ಯೋಜನೆ ಹೊಂದಿದ್ದು ಇದರಿಂದ ಭವಿಷ್ಯದಲ್ಲಿ ಅಲ್ಲಿನ ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ಬರಬಾರದು ಎಂದರು.

ಬಂಗಾರಮಕ್ಕಿಯ ಮಾರುತಿ ಗುರೂಜಿ ಮಾತನಾಡಿ. ಎಲ್ಲ ರೀತಿಯಲ್ಲಿಯೂ ಮಾರಕವಾಗಿರುವ ಯೋಜನೆಯನ್ನು ಕೈಬಿಡದೆ ಹೋದರೆ ನೇಪಾಳ ಮಾದರಿ ಹೋರಾಟ ಅನಿವಾರ್ಯವಾಗುತ್ತದೆ. ಹನ್ನೆರಡು ದಿನಗಳ ನಂತರ ಹೋರಾಟ ನಿಲ್ಲಿಸಿದ್ದೇವೆ ಎಂದು ಸರ್ಕಾರ ನಿಟ್ಟುಸಿರು ಬಿಡುವುದು ಬೇಡ. ತಕ್ಷಣ ಯೋಜನೆ ಕೈಬಿಟ್ಟಿದ್ದೇವೆ ಎಂದು ಗೆಜೆಟ್ನಲ್ಲಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು, ವಿಧಾನಸೌಧದೆದುರು ಅಥವಾ ದೆಹಲಿಯ ಜಂತರ್ ಮಂಥರ್‌ನಲ್ಲಿ ಸಹ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ ಶಿರವಾಳ, ಪ್ರಮುಖರಾದ ಬಿ.ಸ್ವಾಮಿರಾವ್, ಅಖಿಲೇಶ್ ಚಿಪ್ಪಳಿ, ಚೂನಪ್ಪ ಪೂಜಾರಿ, ಶಿವಾನಂದ ಬೆಳಗಾವಿ, ತೇಜಸ್ವಿ ಪಟೇಲ್, ಶಶಿಕಾಂತ್ ಗುರೂಜಿ, ಶಿವಾನಂದ ಕುಗ್ವೆ, ರಮೇಶ್ ಕೆಳದಿ, ಡಾ.ರಾಮಚಂದ್ರಪ್ಪ, ಟಿ.ಡಿ.ಮೇಘರಾಜ್, ರತ್ನಾಕರ ಹೊನಗೋಡು, ಗಣೇಶ್ ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ಕೊಟ್ರಪ್ಪ ನೇದರವಳ್ಳಿ ಇತರರು ಹಾಜರಿದ್ದರು.