ಜಿಲ್ಲಾಸ್ಪತ್ರೆ ಅವ್ಯವಸ್ಥೆ: ಬಿಲ್ ಪಾವತಿಗೆ ಗಂಟೆಗಟ್ಟಲೆ ಕಾಯುವ ದುಃಸ್ಥಿತಿ

| Published : Nov 21 2023, 12:45 AM IST

ಜಿಲ್ಲಾಸ್ಪತ್ರೆ ಅವ್ಯವಸ್ಥೆ: ಬಿಲ್ ಪಾವತಿಗೆ ಗಂಟೆಗಟ್ಟಲೆ ಕಾಯುವ ದುಃಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೇ ಜಾಗದಲ್ಲಿ ಹೊರ ರೋಗಿಗಳ ನೋಂದಣಿ, ಒಳರೋಗಿಗಳ ನೋಂದಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕೌಂಟರ್ ಇದ್ದು, ಹೆಚ್ಚಿನ ರೋಗಿಗಳ ಇರುವುದರಿಂದ ಸರತಿ ಸಾಲಿನಲ್ಲಿ ನಿಂತುಕೊಳ್ಳುವಂತಾಗಿದ್ದು, ಚಿಕಿತ್ಸೆ ಕೂಡ ವಿಳಂಬವಾಗುತ್ತಿದೆ. ಚೀಟಿ ಮಾಡಿಸಿ ವೈದ್ಯರ ಬಳಿ ತೆರಳಿದಾಗ ಹೆಚ್ಚಿನ ರೋಗಿಗಳು ಇರುವುದರಿಂದ ಅಲ್ಲೂ ಕೂಡ ರೋಗಿಗಳು ಸರದಿ ಸಾಲಿನಲ್ಲಿ ನಿಂತು ದಿನವೀಡಿ ಆಸ್ಪತ್ರೆಯಲ್ಲೇ ಸಮಯ ಕಳೆಯುವಂತಾಗಿದೆ.

ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ(ಜಿಲ್ಲಾಸ್ಪತ್ರೆ) ರೋಗಿಗಳು ಬಿಲ್ ಪಾವತಿ ಮಾಡಲು ಹಾಗೂ ಚೀಟಿ ಪಡೆಯಲು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿದ್ದು, ಇದರಿಂದ ರೋಗಿಗಳು ಚಿಕಿತ್ಸೆ ಪಡೆಯಲು ಕೂಡ ವಿಳಂಬ ಎನ್ನುವಂತಾಗಿದೆ.

ಸೋಮವಾರ ಹಾಗೂ ಶುಕ್ರವಾರ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಆದರೆ ಇಲ್ಲಿ ವಿವಿಧ ಚಿಕಿತ್ಸೆಯ ಬಿಲ್ಲಿಂಗ್, ಹೊರ ರೋಗಿಗಳ ಹಾಗೂ ಒಳ ರೋಗಿಗಳ ನೋಂದಣಿ ಮಾಡಲು ಸರದಿ ಸಾಲಿನಲ್ಲಿ ಹೆಚ್ಚು ಸಮಯ ನಿಲ್ಲುವಂತಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲೇ ಎಲ್ಲಾ ಸೇವೆಗಳಿಗೆ ಶುಲ್ಕ ಪಾವತಿ ಮಾಡುವ ಕೇಂದ್ರ ಇರುವುದರಿಂದ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಕರೆ ತರುವುದು ಪ್ರಯಾಸವಾಗುತ್ತಿದೆ.

ಒಂದೇ ಜಾಗದಲ್ಲಿ ಹೊರ ರೋಗಿಗಳ ನೋಂದಣಿ, ಒಳರೋಗಿಗಳ ನೋಂದಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕೌಂಟರ್ ಇದ್ದು, ಹೆಚ್ಚಿನ ರೋಗಿಗಳ ಇರುವುದರಿಂದ ಸರತಿ ಸಾಲಿನಲ್ಲಿ ನಿಂತುಕೊಳ್ಳುವಂತಾಗಿದ್ದು, ಚಿಕಿತ್ಸೆ ಕೂಡ ವಿಳಂಬವಾಗುತ್ತಿದೆ. ಚೀಟಿ ಮಾಡಿಸಿ ವೈದ್ಯರ ಬಳಿ ತೆರಳಿದಾಗ ಹೆಚ್ಚಿನ ರೋಗಿಗಳು ಇರುವುದರಿಂದ ಅಲ್ಲೂ ಕೂಡ ರೋಗಿಗಳು ಸರದಿ ಸಾಲಿನಲ್ಲಿ ನಿಂತು ದಿನವೀಡಿ ಆಸ್ಪತ್ರೆಯಲ್ಲೇ ಸಮಯ ಕಳೆಯುವಂತಾಗಿದೆ.

ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಖುರ್ಚಿಗಳ ಕೊರತೆ ಇದೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಹೊರ ಭಾಗದಲ್ಲಿ ರೋಗಿಗಳು ಕುಳಿತುಕೊಳ್ಳುವಂತಾಗಿದೆ. ಹೀಗೆ ಕುಳಿತುಕೊಂಡ ರೋಗಿಗಳನ್ನು ಅಲ್ಲಿನ ಸಿಬ್ಬಂದಿ ಒಳಗೆ ಹೋಗಿ ಕುಳಿತುಕೊಳ್ಳಿ ಎಂದು ಗದರಿಸುವ ದೃಶ್ಯಗಳು ಸಾಮಾನ್ಯವಾಗಿದೆ. ಆದರೆ ಒಳ ಭಾಗದಲ್ಲಿ ತೆರಳಿದ ವೇಳೆ ಖುರ್ಚಿಗಳು ಇಲ್ಲದೆ ಕೆಲವು ರೋಗಿಗಳು ನಡೆದಾಡುವ ಜಾಗದಲ್ಲಿ ಕುಳಿತುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಎಕ್ಸರೇ, ರಕ್ತ ಪರೀಕ್ಷೆ, ಹೊರ ರೋಗಿಗಳ ನೋಂದಣಿ, ಒಳ ರೋಗಿಗಳ ನೋಂದಣಿ ಸೇರಿದಂತೆ ಆಸ್ಪತ್ರೆಯ ಎಲ್ಲಾ ಸೇವೆಗಳಿಗೆ ಬಿಲ್ ಪಾವತಿಸಲು ಒಂದೇ ಭಾಗದಲ್ಲಿ ಕೇಂದ್ರವಿರುವುದರಿಂದ ಈ ಸಮಸ್ಯೆ ಉಂಟಾಗಿದೆ.

ಮೂಳೆ ವಿಭಾಗದಲ್ಲಿ ವೈದ್ಯರು ತಪಾಸಣೆ ನಡೆಸಿ ಎಕ್ಸರೇ ಮಾಡಿಸಿಕೊಂಡು ಬರುವಂತೆ ರೋಗಿಗಳಿಗೆ ಸೂಚಿಸುತ್ತಾರೆ. ಅದರಂತೆ ರೋಗಿಗಳು ಎಕ್ಸರೇ ಬಿಲ್ ಪಾವತಿಸಲು ಗಂಟೆ ಗಂಟಲೆ ನಿಲ್ಲುತ್ತಾರೆ. ನಂತರ ಎಕ್ಸರೇ ಮಾಡಿಸಿಕೊಂಡು ವೈದ್ಯರ ಬಳಿ ತೆರಳಿದಾಗ ಮೊದಲು ತಪಾಸಣೆ ನಡೆಸಿದ ವೈದ್ಯರು ಇರುವುದಿಲ್ಲ. ಇದರಿಂದ ವೈದ್ಯರನ್ನು ಕಾಣಲು ಮತ್ತೊಂದು ದಿನ ರೋಗಿಗಳು ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ಎದುರಾಗಿದ್ದು, ವಿಳಂಬದಿಂದಾಗಿ ರೋಗಿಗಳು ಪರಿತಪಿಸುವಂತಾಗಿದೆ.

ವಾರದಲ್ಲಿ ಎರಡು ದಿನ ಹೆಚ್ಚು ಹೊರ ರೋಗಿಗಳು ಆಗಮಿಸುವುದರಿಂದ ಆಸ್ಪತ್ರೆಯಲ್ಲಿ ಹೆಚ್ಚುವರಿ ಬಿಲ್ ಕೌಂಟರ್ ತೆರೆಯಬೇಕಾಗಿದೆ. ಇದಾದರೆ ಚಿಕಿತ್ಸೆ ರೋಗಿಗಳಿಗೆ ಸಕಾಲದಲ್ಲಿ ದೊರಕಲಿದೆ. ಬಾಕ್ಸ್...

ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ!

ಜಿಲ್ಲಾಸ್ಪತ್ರೆಗೆ ಪ್ರತಿ ದಿನ ಅಂದಾಜು 450 ಮಂದಿ ಹೊರ ರೋಗಿಗಳ ಸಂಖ್ಯೆ ಇತ್ತು. ಆದರೆ ಇದೀಗ ಪ್ರತಿ ದಿನ ಸಾವಿರಾರು ಮಂದಿ ಹೊರ ರೋಗಿಗಳು ಆಗಮಿಸುತ್ತಿದ್ದಾರೆ. ಜಿಲ್ಲೆಗೆ ಒಂದೇ ದೊಡ್ಡ ಆಸ್ಪತ್ರೆ ಇರುವುದರಿಂದ ರೋಗಿಗಳ ಸಂಖ್ಯೆ ಏರಿಕೆಯಾಗಿದೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ 1,600 ಚಿಕಿತ್ಸೆಗಳಲ್ಲಿ ಸುಮಾರು 1,352 ಚಿಕಿತ್ಸೆಗಳು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದೊರಕುತ್ತಿದೆ. ಇದರಿಂದ ದಿನ ನಿತ್ಯ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೊಡಗು ಮಾತ್ರವಲ್ಲದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಹಾಗೂ ಹಾಸನ ಗಡಿ ಭಾಗದ ರೋಗಿಗಳು ಕೂಡ ಜಿಲ್ಲಾಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯ ನಡುವೆಯೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಉತ್ತಮ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿದೆ.

ಹೊಸ ಆಸ್ಪತ್ರೆ ಕಟ್ಟಡದಿಂದ ಸಮಸ್ಯೆ ಮುಕ್ತಿ

ಜಿಲ್ಲಾಸ್ಪತ್ರೆಯ ಸಮೀಪದಲ್ಲೇ ಸುಮಾರು 150 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇನ್ನು ಮರ‍್ನಾಲ್ಕು ತಿಂಗಳಲ್ಲಿ ನೂತನ ಕಟ್ಟಡ ಕಾರ್ಯಾರಂಭ ಮಾಡಲಿದೆ. ಈಗಾಗಲೇ ನೂತನ ಆಸ್ಪತ್ರೆಯಲ್ಲಿ ಕಚೇರಿಗಳ ಕೆಲಸ ನಡೆಯುತ್ತಿದೆ. ಇದಾದರೆ ಜಿಲ್ಲೆಯ ರೋಗಿಗಳಿಗೆ ಮತ್ತಷ್ಟು ಆರೋಗ್ಯ ಸೇವೆಗಳು ಸುಲಭವಾಗಿ ಹಾಗೂ ನಿಗದಿತ ಸಮಯದಲ್ಲಿ ದೊರಕಲಿದೆ. ಸದ್ಯಕ್ಕೆ ಸಿಬ್ಬಂದಿ ಕೊರತೆ ಕಾಡುತ್ತಿದೆ. 479 ಮಂದಿ ಸಿಬ್ಬಂದಿಗಳು ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಆಸ್ಪತ್ರೆ ಆರಂಭದ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸದ್ಯಕ್ಕೆ ಆಸ್ಪತ್ರೆಯಲ್ಲಿ ಜಾಗದ ಸಮಸ್ಯೆಯಿದೆ. ಬೆಳಗ್ಗೆ 10ರಿಂದ 12 ಗಂಟೆಯ ತನಕ ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ಇರುತ್ತಾರೆ. ಸಿಬ್ಬಂದಿ ಕೊರತೆಯೂ ಕೂಡ ಇದೆ. ಮರ‍್ನಾಲ್ಕು ತಿಂಗಳಲ್ಲಿ ಪಕ್ಕದಲ್ಲಿ ಹೊಸ ಆಸ್ಪತ್ರೆ ಕಟ್ಟಡ ಆರಂಭವಾದ ಕೂಡಲೇ ಈ ಸಮಸ್ಯೆ ಇತ್ಯರ್ಥವಾಗಲಿದೆ. ಆಸ್ಪತ್ರೆಯಲ್ಲಿ ಬಿಲ್ಲಿಂಗ್‌ಗೆ ಹೆಚ್ಚುವರಿ ಕೌಂಟರ್ ವ್ಯವಸ್ಥೆ ಮಾಡಲಾಗುವುದು.

-ಡಾ. ಕಾರ್ಯಪ್ಪ, ಡೀನ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ---ಜಿಲ್ಲಾಸ್ಪತ್ರೆ ಈಗ ಕೊಡಗಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿಗೆ ಹುಣಸೂರು, ಪಿರಿಯಾಪಟ್ಟಣ ಹಾಗೂ ಹಾಸನ ಭಾಗದ ರೋಗಿಗಳು ಕೂಡ ಆಗಮಿಸುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ಕೂಡಲೇ ಹೆಚ್ಚುವರಿ ಬಿಲ್ಲಿಂಗ್ ಕೌಂಟರ್ ತೆರೆಯಬೇಕು. ಇಷ್ಟು ಸರಳ ಪರಿಹಾರ ಕೂಡ ನಮ್ಮ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಬಾರದಿರುವುದು ದುರಾದೃಷ್ಟಕರ.

-ಪವನ್ ಪೆಮ್ಮಯ್ಯ, ಜಿಲ್ಲಾಧ್ಯಕ್ಷ, ಕೊಡಗು ರಕ್ಷಣಾ ವೇದಿಕೆ