ಜಿಲ್ಲಾಸ್ಪತ್ರೆ ಮೇಲ್ಚಾವಣಿ ಕುಸಿತ; ರೋಗಿ ಪಾರು

| Published : Mar 14 2024, 02:00 AM IST

ಸಾರಾಂಶ

ಕಳೆದ ರಾತ್ರಿ ಜಿಲ್ಲಾಸ್ಪತ್ರೆಯ ವಾರ್ಡ್ ನಂಬರ್ 71-72ರಲ್ಲಿ ಒಳ ರೋಗಿಗಳು ಮಲಗಿದ್ದ ವೇಳೆ ಮೇಲ್ಚಾವಣಿಯಲ್ಲಿ ಏನೋ ಸದ್ದು ಕೇಳಿ ಜಾಗೃತಗೊಂಡ ಒಳ ರೋಗಿಯು ಬೀಳುವುದು ಗಮನಿಸಿ, ಅಕ್ಕಪಕ್ಕದ ಬೆಡ್‌ ನವರಿಗೆ ಎಚ್ಚರಿಸಿ, ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ. ನೋಡ ನೋಡುತ್ತಿದ್ದಂತೆ ಕೊಠಡಿ ಮೇಲ್ಚಾವಣಿ ಪ್ಲಾಸ್ಟರ್‌ನ ಸುಮಾರು ಭಾಗವು ಬೆಡ್‌ ಮೇಲೆ ಬಿದ್ದಿದೆ. ಒಳ ರೋಗಿ ಒಂದು ಕ್ಷಣ ತಡ ಮಾಡಿದ್ದರೂ ತಲೆ ಅಥವಾ ದೇಹದ ಮೇಲೆ ಬಿದ್ದು, ದೊಡ್ಡ ಮಟ್ಟದ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಕರ್ನಾಟಕದ ದೊಡ್ಡ ಆಸ್ಪತ್ರೆ ಅಂತಲೇ ಪ್ರಸಿದ್ಧ ಇಲ್ಲಿನ ಜಿಲ್ಲಾಸ್ಪತ್ರೆಯ ರೋಗಿಗಳ ಕೊಠಡಿಯೊಂದರ ಮೇಲ್ಚಾವಣಿ ಪ್ಲಾಸ್ಟರ್ ಮಾಡಿದ್ದ ಭಾಗ ಕುಸಿದು ಬಿದ್ದ ಪರಿಣಾಮ ಒಳ ರೋಗಿ ಹಾಗೂ ಇತರರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ವರದಿಯಾಗಿದೆ.

ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 71-72ರ ಮೇಲ್ಚಾವಣಿ ಕಿತ್ತುಕೊಂಡು, ಕೆಳಗೆ ಬಿದ್ದಿದೆ. ಮೇಲ್ಚಾವಣಿ ಬೀಳುವ ಸದ್ದನ್ನು ಗಮನಿಸಿದ ಒಳ ರೋಗಿ ಹಾಗೂ ಇತರರು ತಕ್ಷಣವೇ ದೂರಕ್ಕೆ ಓಡಿದ್ದರಿಂದ ದೊಡ್ಡ ಗಾತ್ರದ ಸಿಮೆಂಟ್ ಕಾಂಕ್ರಿಟ್‌ ಬೀಳುವುದು ತಪ್ಪಿದೆ.

ಎಪ್ಪತ್ತರ ದಶಕದಲ್ಲಿ 29 ಎಕರೆ ಪೈಕಿ ಕೆಲ ಭಾಗದಲ್ಲಿ ನಿರ್ಮಾಣವಾದ ವಿಶಾಲವಾದ ಜಿಲ್ಲಾಸ್ಪತ್ರೆಯ ಕಟ್ಟಡ ಈಗಾಗಲೇ ಶಿಥಿಲಾವಸ್ಥೆಯಲ್ಲಿದೆ. ಈಗಾಗಲೇ ಆರ್‌ಸಿಸಿ ಮೇಲ್ಚಾವಣಿಯು ಬಹುತೇಕ ಕಡೆ ಕುಸಿದು ಬಿದ್ದಿದ್ದು, ಆಗಾಗ ಉದುರುವುದು ಸಾಮಾನ್ಯ ಎನ್ನುವಂತಾಗಿದ್ದು. ಆದರೆ, ಕಳೆದ ರಾತ್ರಿ ಏಕಾಏಕಿ ಮೇಲ್ಚಾವಣಿ ಕುಸಿದು ಬಿದ್ದಿದ್ದರಿಂದ ಒಳ ರೋಗಿ ಹಾಗೂ ಅಕ್ಕಪಕ್ಕದ ಬೆಡ್ ನಲ್ಲಿದ್ದ ರೋಗಿಗಳು, ಕುಟುಂಬದವರು ಮುಂಜಾಗ್ರತೆಯಿಂದ ಸುರಕ್ಷಿತ ಸ್ಥಳಕ್ಕೆ ಓಡಿದ್ದರಿಂದ ದೊಡ್ಡ ಮಟ್ಟದ ಅಪಾಯ ಉಂಟಾಗಿಲ್ಲ.

ಕಳೆದ ರಾತ್ರಿ ಜಿಲ್ಲಾಸ್ಪತ್ರೆಯ ವಾರ್ಡ್ ನಂಬರ್ 71-72ರಲ್ಲಿ ಒಳ ರೋಗಿಗಳು ಮಲಗಿದ್ದ ವೇಳೆ ಮೇಲ್ಚಾವಣಿಯಲ್ಲಿ ಏನೋ ಸದ್ದು ಕೇಳಿ ಜಾಗೃತಗೊಂಡ ಒಳ ರೋಗಿಯು ಬೀಳುವುದು ಗಮನಿಸಿ, ಅಕ್ಕಪಕ್ಕದ ಬೆಡ್‌ ನವರಿಗೆ ಎಚ್ಚರಿಸಿ, ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ. ನೋಡ ನೋಡುತ್ತಿದ್ದಂತೆ ಕೊಠಡಿ ಮೇಲ್ಚಾವಣಿ ಪ್ಲಾಸ್ಟರ್‌ನ ಸುಮಾರು ಭಾಗವು ಬೆಡ್‌ ಮೇಲೆ ಬಿದ್ದಿದೆ. ಒಳ ರೋಗಿ ಒಂದು ಕ್ಷಣ ತಡ ಮಾಡಿದ್ದರೂ ತಲೆ ಅಥವಾ ದೇಹದ ಮೇಲೆ ಬಿದ್ದು, ದೊಡ್ಡ ಮಟ್ಟದ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಬಹುತೇಕ ಕಡೆ ನೀರು ತೊಟ್ಟಿಕ್ಕುತ್ತಿದೆ:

ಅವ್ಯವಸ್ಥೆಯ ಆಗರವಾದ, ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿರುವ ಜಿಲ್ಲಾಸ್ಪತ್ರೆಯ ಬಹುತೇಕ ಕಡೆ ಇದೇ ರೀತಿ ಆರ್‌ಸಿಸಿ ಮೇಲ್ಚಾವಣಿಯ ಪ್ಲಾಸ್ಟರ್ ಕಿತ್ತು ಬೀಳುತ್ತಿರುವುದು, ಅಲ್ಲಲ್ಲಿ ಆರ್‌ಸಿಸಿಗೆ ಹಾಕಿರುವ ಕಬ್ಬಿಣದ ಸಾಲುಗಳು ಕಂಡು ಬರುತ್ತಿವೆ. ಇನ್ನು ಮಳೆಗಾಲ ಬಂದರಂತೂ ಆಸ್ಪತ್ರೆಯ ಬಹುತೇಕ ಕಡೆ ನೀರು ತೊಟ್ಟಿರುವುದು, ಕಟ್ಟಡ ಶಿಥಿಲಗೊಳ್ಳುವುದು, ಮೇಲ್ಭಾಗದಿಂದ ನೀರು ಬಸಿಯುವುದು ಸಾಮಾನ್ಯ. ಸಾವಿರಾರು ರೋಗಿಗಳು, ಒಳ ರೋಗಿಗಳು, ವೈದ್ಯರು, ತಜ್ಞ ವೈದ್ಯರು, ಶುಶ್ರೂಷಕರು, ಡಿ ದರ್ಜೆ ನೌಕರರು, ರೋಗಿಗಳ ಕಡೆಯವರು ಇರುವಂತಹ ಆಸ್ಪತ್ರೆ ದುರಸ್ತಿ ಕೈಗೊಳ್ಳುವ ಕೆಲಸವನ್ನು ಸರ್ಕಾರ, ಆರೋಗ್ಯ ಇಲಾಖೆ ಮಾಡಬೇಕಾಗಿದೆ. ಪ್ರಸ್ತಾವನೆ ಸಲ್ಲಿಸಿದರೂ ಅನುದಾನ ಬಂದಿಲ್ಲ

ಕಳೆದ ವರ್ಷದ ಆರಂಭದಲ್ಲೇ ಜಿಲ್ಲಾಸ್ಪತ್ರೆ ಶಿಥಿಲಾವಸ್ಥೆ ತಲುಪಿದ್ದು, ದುರಸ್ತಿ ಕಾರ್ಯ, ಅಗತ್ಯ ಸಲಕರಣೆ ಖರೀದಿಗೆ ಹಿಂದಿನ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ಜಿಲ್ಲಾಸ್ಪತ್ರೆ ಅಧೀಕ್ಷಕ 31 ಕೋಟಿ ರು. ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಸರ್ಕಾರದಿಂದ ಅನುದಾನ ಬರುವುದಿರಲಿ, ಕನಿಷ್ಟ ದುರಸ್ತಿ ಕಾರ್ಯ ಕೈಗೊಳ್ಳುವ ಬಗ್ಗೆ ಸೂಚನೆ ಬಂದಿಲ್ಲ. ಒಟ್ಟು 930 ಹಾಸಿಗೆ ಸಾಮರ್ಥ್ಯದ ದೊಡ್ಡ ಸರ್ಕಾರಿ ಜಿಲ್ಲಾ ಆಸ್ಪತ್ರೆ ಇದಾಗಿದೆ. ಆದರೆ, ಕಟ್ಟಡವು 45-50 ವರ್ಷ ಹಳೆಯದಾಗಿದ್ದರಿಂದ ಸಹಜವಾಗಿಯೇ ಮೇಲ್ಚಾವಣಿ ಕುಸಿದು ಬೀಳುತ್ತಿದ್ದು, ಅಲ್ಲಲ್ಲಿ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ.