ಸಾರಾಂಶ
ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳನ್ನು ಸುಂದರವಾಗಿ, ಕಾರ್ಯಾತ್ಮಕವಾಗಿ ಹಾಗೂ ಆಧುನಿಕ ಆಡಳಿತಕ್ಕೆ ತಕ್ಕಂತೆ ನಿರ್ಮಿಸಿದ್ದಾರೆ. ನಮ್ಮಲ್ಲಿ ಅಂತಹ ಕಟ್ಟಡಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸಭಾಂಗಣ ಕಟ್ಟಡದ ನಿರ್ಮಾಣಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಬೇಕು. ಯಾವುದೇ ರೀತಿಯ ಅಪೇಕ್ಷೆ ಇಲ್ಲದೆ ಜನಸಮುದಾಯದ ಕೆಲಸಗಳು ಆಗಬೇಕು ಎಂದು ಸಚಿವರು ಹೇಳಿದರು.
ಸಾಮಾನ್ಯ ಪ್ರಜೆ, ಬಡ ರೈತರು ತಹಸೀಲ್ದಾರರ ಕಚೇರಿಗೆ ತೊಂದರೆ, ನೋವಿನಿಂದ ಬರುತ್ತಾರೆ. ಅಂಥವರ ಕೆಲಸಗಳನ್ನು ಸುಲಭವಾಗಿ ಮಾಡಿಕೊಡಬೇಕು. ಆತ ನಗುವಿನಿಂದ ಹೋದರೆ ಅದೇ ಒಳ್ಳೆಯ ಆಡಳಿತ. ಒಂದು ದಾಖಲೆ ಪಡೆದುಕೊಳ್ಳಲು ಹತ್ತು ಬಾರಿ ಅಲೆಯಬಾರದು. ಈ ವಿಚಾರವನ್ನು ಅಧಿಕಾರಿಗಳು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಅವುಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳನ್ನು ಸುಂದರವಾಗಿ, ಕಾರ್ಯಾತ್ಮಕವಾಗಿ ಹಾಗೂ ಆಧುನಿಕ ಆಡಳಿತಕ್ಕೆ ತಕ್ಕಂತೆ ನಿರ್ಮಿಸಿದ್ದಾರೆ. ನಮ್ಮಲ್ಲಿ ಅಂತಹ ಕಟ್ಟಡಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ೨ನೇ ಹಂತದಲ್ಲಿ ನೇಮಕವಾಗಿರುವ ೧೫ ಅಭ್ಯರ್ಥಿಗಳಿಗೆ ಸಚಿವರು ಆದೇಶ ಪತ್ರ ವಿತರಿಸಿದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಮತ್ತಿತರರು ಹಾಜರಿದ್ದರು.