ಸಾರಾಂಶ
ತಾಲೂಕಿನ ಅಭಿವೃದ್ಧಿಗೆ ಕೋಟ್ಯಾಂತರ ರು.ಗಳ ಅನುದಾನ ತಂದಿದ್ದೇನೆ ಎಂದು ಜನರಲ್ಲಿ ತಪ್ಪು ಮಾಹಿತಿ ನೀಡುತ್ತಿರುವ ಉಸ್ತುವಾರಿ ಸಚಿವರು ಕೊನೆಯ ಪಕ್ಷ ಗ್ರಾಮಾಂತರ ಪ್ರದೇಶದ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ.
ಸೊರಬ: ತಾಲೂಕಿನ ಅಭಿವೃದ್ಧಿಗೆ ಕೋಟ್ಯಾಂತರ ರು.ಗಳ ಅನುದಾನ ತಂದಿದ್ದೇನೆ ಎಂದು ಜನರಲ್ಲಿ ತಪ್ಪು ಮಾಹಿತಿ ನೀಡುತ್ತಿರುವ ಉಸ್ತುವಾರಿ ಸಚಿವರು ಕೊನೆಯ ಪಕ್ಷ ಗ್ರಾಮಾಂತರ ಪ್ರದೇಶದ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ.
ಇದರಿಂದ ಪ್ರತಿ ದಿನ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ನೇರ ಕಾರಣ ಇಲ್ಲಿನ ಶಾಸಕರಾಗಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆರೋಪಿಸಿದರು.ಭಾನುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸೊರಬ-ಶಿರಾಳಕೊಪ್ಪ, ಸೊರಬ-ಸಾಗರ, ಸೊರಬ-ಆನವಟ್ಟಿ ಮುಖ್ಯರಸ್ತೆ ಗುಂಡಿಗಳು ಅಪಘಾತಗಳಿಗೆ ಕಾರಣವಾಗಿವೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಗಳ ಗುಣಮಟ್ಟ ಇಳಿಮುಖವಾಗಿದ್ದು, ಎಡೆಬಿಡದೆ ಅಪಘಾತಗಳು ನಡೆಯುತ್ತಿವೆ. ಜನತೆ ಅಭಿವೃದ್ಧಿಗೆ ತಾತ್ಪರ್ಯವಿದ್ದರೂ ಇಲ್ಲಿನ ಶಾಸಕರ ಆಡಳಿತದ ವೈಫಲ್ಯದಿಂದಾಗಿ ಮೂಲಭೂತ ಸೌಲಭ್ಯಗಳು ಹಿನ್ನಡೆ ಕಂಡಿವೆ ಎಂದು ದೂರಿದರು.
ತಾಲೂಕಿನ ಹಳೆಸೊರಬ ಗ್ರಾಮದ ಎರಡು ಕೆರೆಗಳ ಏರಿ ರಸ್ತೆ ನಿರ್ಮಿಸುವ ಉದ್ದೇಶವಿದ್ದರೂ, ಇತ್ತೀಚೆಗೆ ಅದನ್ನು ಕೇವಲ ಒಂದು ಕೆರೆ ರಸ್ತೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದು ವಾಹನ ಸಂಚಾರಕ್ಕೆ ವಿರುದ್ಧವಾಗಿದ್ದು ಅವ್ಯವಸ್ಥೆಯಿಂದ ನಿರ್ಮಾಣವಾಗಿದೆ. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ತೀವ್ರ ರೂಪಪಡೆದಿದ್ದು, ಜನಸಾಮಾನ್ಯರು ಮೂಲಭೂತ ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ.
ಹತ್ತಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದ ಪರಿಸ್ಥಿತಿಯಿಂದಾಗಿ ಗ್ರಾಮೀಣ ಪ್ರದೇಶದ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.ಸರ್ಕಾರದ ನಿರ್ಲಕ್ಷ್ಯದಿಂದಾಗಿ ಪ್ರಾಥಮಿಕ ಆರೋಗ್ಯ ಸೇವೆಗಳೇ ಕುಸಿಯುತ್ತಿವೆ. ವೈದ್ಯರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ, ಗ್ರಾಮೀಣ ಜನತೆಗೆ ಆರೋಗ್ಯ ಸೇವೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಎಲ್ಲಾ ಇಲಾಖೆಗಳೂ ಒಂದೇ ಸೂರಿನಡಿ ಕಾರ್ಯನಿರ್ವಹಿಸಬಲ್ಲಂತಹ ಸಮಗ್ರ ವಿಸ್ತಾರ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕಾಗಿದೆ.
ಇಂತಹ ಯೋಜನೆಯು ಜನತೆಗೆ ಸರಳ ಮತ್ತು ಪರಿಣಾಮಕಾರಿ ಸೇವೆಗಳನ್ನು ನೀಡಲು ಸಹಕಾರಿ ಆಗಲಿದೆ. ಬೆಳೆ ನಾಶವಾದ ರೈತರಿಗೆ ಸರಿಯಾದ ಪರಿಹಾರ ನೀಡಲಾಗುತ್ತಿಲ್ಲ. ತಾಲೂಕಿನ ಜಡ್ಡಿಹಳ್ಳಿ, ಚಂದ್ರಗುತ್ತಿ ಭಾಗದ ಬಗರ್‌ಹುಕುಂ ಸಾಗುವಳಿದಾರರರಿಗೆ ನೋಟಿಸ್ ನೀಡಿದ್ದು, ರೈತರ ನೆರವಿಗೆ ಈಗಿನ ಶಾಸಕರು ಮುಂದಾಗಬೇಕು ಎಂದರು.ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮಗಳನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ಸಿಬಿಐ ತನಿಖೆಗೆ ಅವಕಾಶ ನೀಡಿರುವ ಕೋರ್ಟ್ ಕ್ರಮವನ್ನು ಸ್ವಾಗತಿಸಿದ ಅವರು, ಇದು ಬಿಜೆಪಿ ಸರ್ಕಾರದ ನಿಷ್ಠೆ ಮತ್ತು ಜವಾಬ್ದಾರಿಯ ದಿಟ್ಟ ನಿದರ್ಶನವಾಗಿದೆ. ಜನತೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಮಟ್ಟಿಗೆ ಬದಲಾಗಬೇಕಿದೆ.
ಶಿಷ್ಟಾಚಾರ, ಪರಿಶುದ್ಧ ಆಡಳಿತ, ಪ್ರಾಮಾಣಿಕ ಅಭಿವೃದ್ಧಿಗೆ ತೀವ್ರ ಅಗತ್ಯವಿದೆ. ಇದಕ್ಕಾಗಿ ನಾವು ಕಟಿಬದ್ಧರಾಗಿದ್ದೇವೆ ಎಂದರು.ಸಭೆಯಲ್ಲಿ ಪುರಸಭಾ ಅಧ್ಯಕ್ಷ ಪ್ರಭು ಮೇಸ್ತ್ರೀ, ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ಡಿ.ಉಮೇಶ, ಜಿಪಂ ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ಸೋಮಶೇಖರ ವಕೀಲ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ನಾಗರಾಜ ಕಲ್ಲುಕೊಪ್ಪ, ಶಿವನಗೌಡ, ಅಶೋಕ್ ಶೇಟ್, ಕೆ.ಜಿ.ಬಸವರಾಜ ಕೊಡಕಣಿ, ಕೃಷ್ಣಮೂರ್ತಿ ಕೊಡಕಣಿ, ಕಿರಣ್‌ಕುಮಾರ್ ಶಿವಪುರ, ವಸಂತ್ ಮಂಡಗಳಲೆ, ಶರತ್ ಗೆಂಡ್ಲಾ ಹೊಸೂರು ಮತ್ತಿತರರಿದ್ದರು.