ಸಾರಾಂಶ
ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಕ್ಕೆ ಎಚ್ಚರಿಕೆಯ ಕೊಡುವ ಶಕ್ತಿ ಪತ್ರಿಕಾರಂಗಕ್ಕೆ ಇದೆ.
ಕನ್ನಡಪ್ರಭ ವಾರ್ತೆ ಮೈಸೂರು
ಪತ್ರಿಕಾ ಧರ್ಮ ಇನ್ನೂ ಜೀವಂತವಾಗಿದ್ದು, ಪತ್ರಕರ್ತರು ಸತ್ಯವನ್ನು ಎತ್ತಿಹಿಡಿಯುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಜಾಗೃತಗೊಳಿಸಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪತ್ರಕರ್ತರು, ಜನಪ್ರತಿನಿಧಿಗಳು ಸಂವಿಧಾನದ ಆಶಯದಂತೆ ಜನಪರವಾಗಿ ಕಾರ್ಯ ನಿರ್ವಹಿಸಬೇಕು. ಎಲ್ಲರ ಸಮಾನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಕ್ಕೆ ಎಚ್ಚರಿಕೆಯ ಕೊಡುವ ಶಕ್ತಿ ಪತ್ರಿಕಾರಂಗಕ್ಕೆ ಇದೆ. ಜನಸಾಮಾನ್ಯರಿಗೆ ಆಗುವ ಅನ್ಯಾಯವನ್ನು ತಡೆಯುವುದು ಹಾಗೂ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ಪತ್ರಿಕಾರಂಗದ ಪಾತ್ರ ನಿರ್ಣಾಯಕವಾಗಿದೆ ಎಂದರು.ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ನಾಡಿಗೆ ಹಾಗೂ ದೇಶಕ್ಕಾಗಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತಾ ಬಂದಿದೆಯೋ, ಅದೇ ರೀತಿ ಪತ್ರಿಕಾರಂಗವೂ ಪ್ರತಿನಿತ್ಯ ನಾಡಿಗೆ ಹಾಗೂ ದೇಶಕ್ಕೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ಮಾಡುತ್ತಾ ಬಂದಿದೆ. ಹಿಂದಿನ ಹಾಗೂ ಇಂದಿನಾ ಪ್ರತಿಕಾರಂಗಕ್ಕೂ ಬಹಳಷ್ಟು ವ್ಯತ್ಯಾಸವನ್ನು ನೋಡಿದ್ದೇವೆ ಎಂದು ಅವರು ತಿಳಿಸಿದರು.ಯಾವುದೇ ಪಕ್ಷ ಗೆದ್ದ ಮೇಲೆ ರಾಜ್ಯ, ರಾಷ್ಟ್ರ ಹಾಗೂ ಸಾರ್ವಜನಿಕರ ಅಭಿವೃದ್ಧಿಯ ಬಗ್ಗೆ, ಸಮಾನತೆ ಹಾಗೂ ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಾರೆ. ಆದರೆ, ಸಂವಿಧಾನ ಬದ್ಧವಾಗಿ ಭಾಷಣ ಮಾಡುವ ನಾವು, ಅದರ ಪ್ರಕರವಾಗಿ ನಡೆದುಕೊಳ್ಳುತ್ತಿದ್ದೇವೆಯೇ ಎಂಬುದರ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ನಗರದಿಂದ ಹಿಡಿದು ಹಳ್ಳಿಯ ಪ್ರತಿಯೊಂದು ಮನೆ ಮನೆಗೆ ತಲುಪಿ ಜನಸಾಮಾನ್ಯರೂ ಪತ್ರಿಕೆಗಳನ್ನು ಓದುವುದರಿಂದ ಪತ್ರಿಕಾ ಧರ್ಮ ಇನ್ನೂ ಉಳಿದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಪತ್ರಿಕಾ ವಿತರಕರು ಚಳಿ, ಮಳೆ ಹಾಗೂ ಗಾಳಿಯನ್ನು ಲೆಕ್ಕಿಸದೆ ಇಂದಿಗೂ ಸೈಕಲ್ ಮೂಲಕ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸಿ ರಾಜ್ಯ, ರಾಷ್ಟ್ರದಲ್ಲಿ ನಡೆಯುವ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಂತಹ ಪತ್ರಿಕಾ ವಿತರಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು. ಪತ್ರಿಕೆಗಳು ಪೂರಕವಾಗಿರಬೇಕುಸಂಘದ ಡೈರಿ ಬಿಡುಗಡೆಗೊಳಿಸಿದ ಸಿದ್ದಾರ್ಥ ಗ್ರೂಪ್ಸ್ ಮುಖ್ಯಸ್ಥ ಪಿ.ವಿ. ಗಿರಿ ಮಾತನಾಡಿ, ಪತ್ರಿಕೆಗಳು ಯುವಜನರಿಗೆ, ವಿದ್ಯಾರ್ಥಿಗಳಿಗೆ ಪೂರಕವಾಗಿರಬೇಕು. ಅನಗತ್ಯ ವಿವಾದಗಳ ಬಗ್ಗೆ ಜನರ ಅಭಿಪ್ರಾಯವನ್ನು ಪ್ರಕಟಿಸುವ ಸ್ಥಳವಾಗಬಾರದು ಎಂದರು.ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿರುವ ಮೈಸೂರಿನಲ್ಲಿ ಉತ್ತಮ ವಾಹನ ನಿಲುಗಡೆ ವ್ಯವಸ್ಥೆಯ ಅಗತ್ಯವಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿನ ಸಮಸ್ಯೆಗಳನ್ನು ಜನಪ್ರತಿನಿಧಿಗಳು, ಸರ್ಕಾರದ ಗಮನಕ್ಕೆ ತರುವಲ್ಲಿ ಮಾಧ್ಯಮಗಳ ಕೆಲಸ ಅತ್ಯಂತ ಮಹತ್ವದಾಗಿದೆ ಎಂದು ತಿಳಿಸಿದರು.ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಟಿ. ಗುರುರಾಜ್, ಜೆ. ಜಯಂತ್, ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಚೀ.ಜ. ರಾಜೀವ್, ಪ್ರಜಾಸಂದೇಶ ದತ್ತಿ ಪ್ರಶಸ್ತಿ ಪುರಸ್ಕೃತ ಪಿ. ಶಿಲ್ಪಾ, ಪಿಎಚ್.ಡಿ ಪದವಿ ಪುರಸ್ಕೃತ ನಾಗರಾಜ್ ನವೀಮನೆ ಮತ್ತು ಸಾಹಿತಿ ಬನ್ನೂರು ಕೆ. ರಾಜು ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮೊದಲಾದವರು ಇದ್ದರು.----ಕೋಟ್...ರಾಜ್ಯ ಹಾಗೂ ರಾಷ್ಟ್ರದ ಮುಂದಿನ ಭವಿಷ್ಯ ಯಾವ ರೀತಿ ಇರಬೇಕು ಎಂದು ತೀರ್ಮಾನ ಮಾಡುವ ವೇದಿಕೆಗಳೇ ಇಂದು ಸ್ವಾರ್ಥ ಮನೋಭಾನೆಗಳಿಂದ ಕೂಡಿದೆ. ಜನಪರ ತೀರ್ಮಾನಗಳನ್ನು ಕೈಗೊಳ್ಳಬೇಕಿದ್ದ ವಿಧಾನಸಭೆ, ಸಂಸತ್ ಸಭೆಯಲ್ಲಿನ ಚರ್ಚೆಗಳು ವಿಫಲಗೊಳ್ಳುತ್ತಿವೆ.- ಜಿ.ಟಿ. ದೇವೇಗೌಡ