ಜಿಲ್ಲಾ ಪತ್ರಕರ್ತರ ಸಂಘ ಚುನಾವಣೆ: 303 ಮತ ಚಲಾವಣೆ

| Published : Nov 10 2025, 12:30 AM IST

ಸಾರಾಂಶ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕ ಚುನಾವಣೆ ಭಾನುವಾರ ಬಿರುಸಿನಿಂದ ನಡೆದಿದ್ದು, ಇದೇ ಮೊದಲ ಬಾರಿಗೆ ಸಂಘದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತ ಚಲಾವಣೆಯಾಗಿದೆ.

- ದಾವಣಗೆರೆ ಜಿಲ್ಲಾ ಘಟಕ ಇತಿಹಾಸದಲ್ಲಿಯೇ ದಾಖಲೆ ಮತದಾನ । ನಗರ, ಗ್ರಾಮೀಣ, ಹೋಬಳಿಮಟ್ಟದ ಮತದಾರರಿಂದ ಹಕ್ಕು ಚಲಾವಣೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕ ಚುನಾವಣೆ ಭಾನುವಾರ ಬಿರುಸಿನಿಂದ ನಡೆದಿದ್ದು, ಇದೇ ಮೊದಲ ಬಾರಿಗೆ ಸಂಘದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತ ಚಲಾವಣೆಯಾಗಿದೆ.

ಚುನಾವಣೆಯಲ್ಲಿ 323 ಮತದಾರರ ಪೈಕಿ 303 ಮತದಾರರು ಮತ ಚಲಾವಣೆ ಮಾಡಿದ್ದಾರೆ. ದಾವಣಗೆರೆ, ಹರಿಹರ ಅವಳಿ ನಗರ ಸೇರಿದಂತೆ ಜಿಲ್ಲೆಯ ನಗರ, ಗ್ರಾಮೀಣ, ಹೋಬಳಿಮಟ್ಟದ ಮತದಾರರು ಬೆಳಗ್ಗೆಯಿಂದಲೇ ಸ್ವಯಂ ಪ್ರೇರಣೆಯಿಂದ ಜಿಲ್ಲಾ ಕೇಂದ್ರಕ್ಕೆ ಬಂದು ಮತ ಚಲಾಯಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಕನ್ನಡ ಭಾರತಿ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರು ನೇತೃತ್ವದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆವರೆಗೆ ಅತ್ಯಂತ ಶಾಂತಿ, ಸುವ್ಯವಸ್ಥಿತವಾಗಿ ಚುನಾವಣೆ ನಡೆಯಿತು. ಜಿಲ್ಲಾ ಪೊಲೀಸ್ ಇಲಾಖೆಯಿಂದಲೂ ಸೂಕ್ತ ಭದ್ರತೆ ಒದಗಿಸಲಾಗಿತ್ತು.

ಸಂಘದ ಹಾಲಿ ಅಧ್ಯಕ್ಷರಾಗಿದ್ದ ಜನತಾವಾಣಿಯ ಇ.ಎಂ. ಮಂಜುನಾಥ, ಕೆ.ಚಂದ್ರಣ್ಣ ನೇತೃತ್ವದ ತಂಡ, ದಾವಣಗೆರೆ ಕನ್ನಡಿಗ ಸಂಪಾದಕ ಆರ್.ರವಿ, ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್‌ ನೇತೃತ್ವದ ತಂಡ ಹಾಗೂ ಯುವ ಪತ್ರಕರ್ತರಾದ ಭುವನೇಶ್ವರಿ ಪತ್ರಿಕೆ ಸಂಪಾದಕ ಎನ್.ಆರ್‌.ರವಿ, ಇಂದಿನ ಸುದ್ದಿ ಸಂಪಾದಕ ಅನಿಲಕುಮಾರ ವಿ.ಭಾವಿ ನೇತೃತ್ವದ ತಂಡ ಹೀಗೆ ಮೂರು ತಂಡಗಳು ಸ್ಪರ್ಧೆಯನ್ನು ಕಾವೇರಿಸಿದ್ದವು.

ಕಳೆದ ರಾತ್ರಿ ಬದಲಾದ ಪರಿಸ್ಥಿತಿಯಲ್ಲಿ ಮೂರನೇ ಗುಂಪಿನ ನೇತೃತ್ವ ವಹಿಸಿದ್ದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಎನ್.ಆರ್‌.ರವಿ ತಾವು ತಟಸ್ಥವಾಗಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಘೋಷಿಸುವ ಮೂಲಕ ಚುನಾವಣೆ ಮತ್ತಷ್ಟು ರಂಗೇರುವಂತೆ ಮಾಡಿದ್ದರು. ತೀವ್ರ ಬಿರುಸಿನಿಂದ ಕೂಡಿದ್ದ ಚುನಾವಣೆಯಲ್ಲಿ ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಹರಿಹರ, ಮಾಯಕೊಂಡ, ಸಂತೇಬೆನ್ನೂರು, ಮಲೇಬೆನ್ನೂರು ಸೇರಿದಂತೆ ವಿವಿಧೆಡೆಯಿಂದ ಯುವ- ಹಿರಿಯ ಪತ್ರಕರ್ತರು, ಮಹಿಳಾ ಪತ್ರಕರ್ತರು ತಮ್ಮ ಹಕ್ಕನ್ನು ಚಲಾಯಿಸಲು ಬಂದಿದ್ದು ವಿಶೇಷವಾಗಿತ್ತು.

ಊರುಗೋಲಿನ ಆಸರೆಯಿಂದ ಬಂದ ಪತ್ರಕರ್ತರು, ವ್ಹೀಲ್‌ಚೇರ್‌ನಲ್ಲಿ ಕುಟುಂಬ ಸದಸ್ಯರು, ಸಹೋದ್ಯೋಗಿಗಳ ಸಹಾಯದಿಂದ ಮತಗಟ್ಟೆಗೆ ಬಂದರು. ನಡೆಯಲಾಗದ ಸ್ಥಿತಿಯಲ್ಲಿದ್ದರೂ ಉತ್ಸಾಹದಿಂದ ಮತ ಚಲಾಯಿಸಲು ಬಂದ ಹಿರಿಯ ಪತ್ರಕರ್ತರು ಎಲ್ಲರಿಗೂ ಪ್ರೇರಣೆಯಾದರು. ಮತ ಚಲಾಯಿಸಿ, ಗಂಟೆಗಟ್ಟಲೇ ಚುನಾವಣೆಯನ್ನು ವೀಕ್ಷಿಸುವ ಮೂಲಕ ಸಂಘದ ಚಟುವಟಿಕೆ, ಬೆಳವಣಿಗೆಗೆ ತಮ್ಮ ಮತವೂ ಅಮೂಲ್ಯವೆಂದರಿತು, 323 ಮತದಾರರ ಪೈಕಿ 303 ಮತದಾರರು ಮತ ಚಲಾಯಿಸಿದ್ದು ಗಮನ ಸೆಳೆಯಿತು.

ಸತತವಾಗಿ ಸಂಘದ ಸದಸ್ಯತ್ವ ಹೊಂದಿದ್ದರೂ, ಕಳೆದ ವರ್ಷದ ಸದಸ್ಯತ್ವ ಇಲ್ಲದ ಕಾರಣಕ್ಕೆ, ತಮ್ಮದಲ್ಲದ ತಪ್ಪಿಗೆ ಪ್ರಮುಖ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ರಾಷ್ಟ್ರೀಯ ಸುದ್ದಿವಾಹಿನಿಯ ಪ್ರತಿನಿಧಿಗಳು, ಕೆಲವು ಸ್ಥಾನಿಕ ಸಂಪಾದಕರು, ಹಿರಿಯ ಪ್ರಧಾನ ವರದಿಗಾರರು, ಗ್ರಾಮೀಣ ಪತ್ರಕರ್ತರು ಹೀಗೆ ಸುಮಾರು 50 ಪತ್ರಕರ್ತರು ಅರ್ಹತೆ ಇದ್ದರೂ ಮತದಾನ ಮಾಡುವ ಅವಕಾಶದಿಂದ ವಂಚಿತರಾದರು. ಆದರೆ, ಇದೇ ಮೊದಲ ಬಾರಿಗೆ ಪತ್ರಕರ್ತರು ಎಂದು ಕಳೆದ 2-3 ವರ್ಷದಿಂದ ಹೊಸದಾಗಿ ಸದಸ್ಯತ್ವ ಪಡೆದವರು ಅಸಲಿ ಪತ್ರಕರ್ತರ ಮುಂದೆ ಮತ ಚಲಾಯಿಸಲು ಹೋಗುತ್ತಿದ್ದುದು ಸಹ ವೃತ್ತಿ ಬಾಂಧವರ ಬಾಯಿಗೆ ಆಹಾರವಾಗಿತ್ತು.

ಜನತಾವಾಣಿ ಸಂಪಾದಕ ಎಂ.ಎಸ್. ವಿಕಾಸ್‌, ನಗರವಾಣಿ ಸಹ ಸಂಪಾದಕ ಬಿ.ಎನ್. ಮಲ್ಲೇಶ, ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು, ಮಹಿಳಾ ಪತ್ರಕರ್ತರು ಮತ ಚಲಾಯಿಸಿದರು. ಮೂರೂ ಗುಂಪಿನಲ್ಲಿ ಉತ್ಸಾಹ ಹೆಚ್ಚಿಸಲು ಮತದಾನದ ಹಕ್ಕು ವಂಚಿತ ಪತ್ರಕರ್ತರು ಮತಗಟ್ಟೆ ಸಮೀಪ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇದ್ದು ಮೂರೂ ತಂಡಗಳಿಗೆ ಉತ್ಸಾಹ ತುಂಬಿದರು. ಚುನಾವಣೆ ಇವತ್ತಷ್ಟೇ, ಯಾವತ್ತಿದ್ದರೂ ನಾವೆಲ್ಲರೂ ಒಂದೇ ಎಂಬ ಮಾತುಗಳೂ ಎಲ್ಲಾ ಗುಂಪಿನಿಂದ ಕೇಳಿ ಬಂದಿದ್ದು, ಸ್ಪರ್ಧಿಗಳಲ್ಲಿದ್ದ ಕ್ರೀಡಾ ಮನೋಭಾವ, ಸ್ಫೂರ್ತಿಗೆ ಸಾಕ್ಷಿಯಾಗಿತ್ತು.

- - -

(ಬಾಕ್ಸ್‌)

* ಏಕಬೋಟೆ, ಚಂದ್ರಣ್ಣ ಗುಂಪಿನ ಮೇಲುಗೈ - ಕಾರ್ಯಕಾರಿ ಸಮಿತಿಯಲ್ಲಿ ಮಂಜುನಾಥ ಗುಂಪಿನ ಪ್ರಾಬಲ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯ 15 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಸ್ಪರ್ಧಿ ಇ.ಎಂ.ಮಂಜುನಾಥ, ರಾಜ್ಯ ಸಮಿತಿ ಸದಸ್ಯ ಸ್ಥಾನದ ಸ್ಪರ್ಧಿ ಕೆ.ಚಂದ್ರಣ್ಣ ನೇತೃತ್ವದ ತಂಡದ 12 ಸದಸ್ಯರು ಗೆಲುವು ದಾಖಲಿಸಿದ್ದಾರೆ. ಕನ್ನಡಪ್ರಭದ ಜಗಳೂರು ವರದಿಗಾರ ಜಿ.ಎಸ್. ಚಿದಾನಂದ 200 ಮತ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕನ್ನಡಪ್ರಭದ ದಾವಣಗೆರೆ ವರದಿಗಾರ ಎಂ.ಎಸ್. ಚನ್ನಬಸವ ಶೀಲವಂತ, ಜಿಲ್ಲಾ ಸಮಾಚಾರದ ಭಾರತಿ, ಸುಭಾಷಿತ ಸಂಪಾದಕ ಕೆ.ಜೈಮುನಿ, ಸಂತೇಬೆನ್ನೂರಿನ ವಿಜಯ ಕರ್ನಾಟಕದ ಎಸ್.ಜಿ.ಕಿರಣ್‌, ದಾವಣಗೆರೆ ಸಂಯುಕ್ತ ಕರ್ನಾಟಕದ ಹಿರಿಯ ಉಪ ಸಂಪಾದಕ ಮಂಜುನಾಥ ಪಿ.ಕಾಡಜ್ಜಿ, ಹರಿಹರದ ಆರ್.ಬಿ. ಪ್ರವೀಣ, ಹೊನ್ನಾಳಿಯ ಎಲ್.ಸಿ.ರಾಘವೇಂದ್ರ ರಾವ್‌, ಚನ್ನಗಿರಿಯ ಕೆ.ಬಿ. ರಘುಪ್ರಸಾದ, ಹರಿಹರ ನಗರವಾಣಿ ಸಂಪಾದಕ ಸುರೇಶ ಆರ್. ಕುಣಿಬೆಳಕೆರೆ, ವಿಜಯ ಕರ್ನಾಟಕದ ಹಿರಿಯ ಉಪ ಸಂಪಾದಕ ವಿಷ್ಣುಕುಮಾರ ಗೇನೇರ್‌, ಹರಿಹರದ ವಿಶ್ವನಾಥ ಮೈಲಾಳ್ ಜಯ ಸಾಧಿಸಿ, ಇ.ಎಂ.ಮಂಜುನಾಥ ತಂಡಕ್ಕೆ ಶಕ್ತಿ ತುಂಬಿದ್ದಾರೆ.

ಅತ್ತ ದಾವಣಗೆರೆ ಕನ್ನಡಿಗ ಸಂಪಾದಕ ಆರ್.ರವಿ ನೇತೃತ್ವದ ಗುಂಪಿನ ಬಿಟಿವಿ ವರದಿಗಾರ ಬಿ.ಅಣ್ಣಪ್ಪ, ಆಕಾಶವಾಣಿ ವರದಿಗಾರ ಕೆ.ಎಸ್. ಚನ್ನಬಸಪ್ಪ ಶಂಭು, ಕೆ.ಏಕಾಂತಪ್ಪ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಸಂಘದ 1 ಅಧ್ಯಕ್ಷ ಸ್ಥಾನ, ಮೂರು ಉಪಾಧ್ಯಕ್ಷ ಸ್ಥಾನಗಳು, 1 ಪ್ರಧಾನ ಕಾರ್ಯದರ್ಶಿ, 3 ಜಿಲ್ಲಾ ಕಾರ್ಯದರ್ಶಿ, 1 ಖಜಾಂಚಿ, 1 ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನದ ಮತ ಎಣಿಕೆ ಕಾರ್ಯ ರಾತ್ರಿ 9.45ರ ವೇಳೆಯೂ ಮುಂದುವರಿದಿತ್ತು.

- - -

-(ಫೋಟೋ ಬರಲಿವೆ):