ಸಾರಾಂಶ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ.6 ಮತ್ತು 7 ರಂದು ಎರಡು ದಿನಗಳ ಕಾಲ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಿ.ಮಂಜುನಾಥ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ತಾಲೂಕಿನ ಹಿರಿಯ ಸಾಹಿತಿ ಡಾ.ಜೆ.ಕೆ.ರಮೇಶ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸುಮಾರು 4 ಸಾವಿರ ಪ್ರತಿನಿಧಿಗಳು ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿಯಾಗಿದ್ದು, ಎರಡು ದಿನಗಳ ಊಟೋಪಚಾರದ ಜೊತೆಗೆ ಓಓಡಿ ಸೌಲಭ್ಯ ನೀಡಲಾಗುತ್ತಿದೆ. ಎರಡು ದಿನಗಳಲ್ಲಿ 10ಕ್ಕು ಹೆಚ್ಚು ಗೋಷ್ಠಿಗಳು ನಡೆಯಲಿದ್ದು, ನಾಡಿನ ಪ್ರಸಿದ್ಧ ಸಾಹಿತಿಗಳು, ಚಲನಚಿತ್ರ ನಟರು ಭಾಗವಹಿಸಲಿದ್ದಾರೆ ಎಂದರು.
ಪುಸ್ತಕ ಮಾರಟ ಮಳಿಗೆಗಳ ಜೊತೆಯಲ್ಲಿ ವಿಭಿನ್ನ ಬಗೆಯ 25ಕ್ಕು ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಶಿಕ್ಷಕಿ ಮೇರಿ ಡಿಸೋಜ ಸಂಗ್ರಹಿಸಿರುವ ಅಮೂಲ್ಯ ನಾಣ್ಯಗಳು ಹಾಗೂ ಶಿವಮೊಗ್ಗ ನಾಗರಾಜ ಅವರ ಸೆರೆ ಹಿಡಿದಿರುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಫೆ.6 ರಂದು ಬೆಳಗ್ಗೆ 9.30ಕ್ಕೆ ಸಾಹಿತ್ಯ ಗ್ರಾಮದ ಆವರಣದಲ್ಲಿ ಧ್ವಜಾರೋಹಣ ನೆರವೇರಲಿದ್ದು, ಡಿಡಿಪಿಐ ಮಂಜುನಾಥ.ಎಸ್.ಆರ್ ರಾಷ್ಟ್ರಧ್ವಜ, ವಾರ್ತಾಧಿಕಾರಿ ಆರ್.ಮಾರುತಿ ನಾಡಧ್ವಜ ರೋಹಣ ಮಾಡಲಿದ್ದು, ಬಳಿಕ ಬೆಳಗ್ಗೆ 10ಕ್ಕೆ ಗೋಪಾಳದ ಆನೆ ಸರ್ಕಲ್‌ನಿಂದ ಹೊರಡುವ ಸಮ್ಮೇಳನಾಧ್ಯಕ್ಷರೊಂದಿಗೆ ಸಾಂಸ್ಕೃತಿಕ ನಡಿಗೆಯನ್ನು ರಾಜ್ಯ ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎಸ್.ರವಿಕುಮಾರ್ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜೆ.ಪಲ್ಲವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಮೋಹನ್‌ಕುಮಾರ್, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಯೋಗೀಶ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶರಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ಬೆಳಗ್ಗೆ 10.30ಕ್ಕೆ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಮ್ಮೇಳನದ ಸ್ಮರಣ ಸಂಚಿಕೆ ಕ್ರಿಯಾಶೀಲತೆ ಒಳನೋಟ ಪುಸ್ತಕವನ್ನು ಲೋಕಾರ್ಪಣೆಗೊಸಲಿದ್ದಾರೆ. ಸರ್ವಾಧ್ಯಕ್ಷ ಡಾ.ಜೆ.ಕೆ.ರಮೇಶ್ ಅವರ ''''''''ಇಂಡಿಯಾದ ಹೊರಗೊಂದು ಹಣಕುʼ ಕೃತಿ ಹಾಗೂ ಬಿ.ಚಂದ್ರೇಗೌಡರ ದೇಶಾಂತರ ಕಾದಂಬರಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಲೋಕಾರ್ಪಣೆಗೊಳಿಸಲಿದ್ದು, ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ದತ್ತಿನಿಧಿ ಸ್ವೀಕಾರ ಮಾಡಲಿದ್ದಾರೆ.ಜಿಲ್ಲಾ 18ನೇ ಕಸಾಸ ಸರ್ವಾಧ್ಯಕ್ಷರಾದ ಡಾ.ಎಸ್.ಪಿ.ಪದ್ಮಪ್ರಸಾದ್, ಕುವೆಂಪು ವಿವಿ ಕುಲಪತಿ ಡಾ.ಶರತ್ ಅನಂತಮೂರ್ತಿ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ವಿಪ ಸದಸ್ಯ ಎಸ್.ಎಲ್.ಭೋಜೇಗೌಡ, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪ ಭಾಗವಹಿಸಲಿದ್ದು, ಡಾ.ಜೆ.ಕೆ.ಆರ್ ಅವರ ʼಮಲೆಯ ಸೀಮೆಯ ಕಥೆಗಳುʼ, ಪ್ರೊ.ಸತ್ಯನಾರಾಯಣ ಅವರ ಅಂತರಂಗದ ಸುತ್ತ ಹನಿಗವನ ಕೃತಿ, ಡಾ.ಶ್ರೀಪತಿ ಹಳಗುಂದ ಅವರ ವಿಮರ್ಶಾಕೃತಿ ʼಚಿತ್ರ ಚಿಂತನʼ ಮತ್ತು ʼವಿಲೋಚನʼ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 4ಕ್ಕೆ ನಡೆಯುವ ಸಮ್ಮೇಳನಾಧ್ಯಕ್ಷರ ಬದುಕು-ಬರಹ ಗೋಷ್ಠಿ, ಸಂಜೆ 6ಕ್ಕೆ ನಡೆಯುವ ಜಾಗತೀಕರಣ ಮತ್ತು ಕನ್ನಡ ಅಸ್ಮಿತೆ ಗೋಷ್ಠಿ, ಸಂಜೆ 7.30ಕ್ಕೆ ನಡೆಯುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಸಂವಾದ ನಡೆಯಲಿದೆ ಎಂದು ಮಾಹಿತಿ ನೀಡಿದರು.ಫೆ.7 ರಂದು ಬೆಳಗ್ಗೆ 9.30ಕ್ಕೆ ಸಾಹಿತ್ಯ ಗ್ರಾಮದ ಆವರಣದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ.ಎಸ್ ರಾಷ್ಟ್ರಧ್ವಜ, ಬಿಇಓ ರಮೇಶ್ ನಾಡಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಪರಿಷತ್ತಿನ ಧ್ವಜಾರೋಹಣಗೊಳಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ : ಈಚಿನ ಕಥನಕ್ರಮ ಎಂಬ ವಿಷಯದ ಕುರಿತು ಗೋಷ್ಠಿ ಜರುಗಲಿದ್ದು, ಸಾಹಿತಿ ಡಾ.ಮೇಟಿ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಮಲೆನಾಡು-ಬದುಕಿನ ಸವಾಲು ಗೋಷ್ಠಿ, ಮಧ್ಯಾಹ್ನ 2:30ಕ್ಕೆ ನಡೆಯುವ ಕಥೆ ಹೇಳುವೆವು ಕೇಳಿ ಗೋಷ್ಠಿಯಲ್ಲಿ ಪತ್ರಕರ್ತ ಗೋಪಾಲ ಯಡೆಗೆರೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4.30ಕ್ಕೆ ನಡೆಯುವ ಮಾಧ್ಯಮ ಬದ್ಧತೆಗಳು ಗೋಷ್ಠಿ ಜರುಗಲಿದೆ ಎಂದರು,
ಸಂಜೆ 6ಕ್ಕೆ ನಡೆಯುವ ಸಮ್ಮೇಳನದ ಸಮಾರೋಪದಲ್ಲಿ ಸಾಂಸ್ಕೃತಿಕ ಚಿಂತಕ ದಿನೇಶ್ ಅಮಿನ್ ಮಟ್ಟು ಸಮಾರೋಪ ಮಾತುಗಳನ್ನಾಡಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಸಮ್ಮೇಳನಾಧ್ಯಕ್ಷರಿಗೆ ಅಭಿನಂದಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ಕೆ.ಸಂಗಮೇಶ್ವರ, ಬಿ.ವೈ.ವಿಜಯೇಂದ್ರ, ವಿಪ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಎನ್.ಹೇಮಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ, ದತ್ತಿ ದಾನಿಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದಿಸಲಾಗುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಎಂ.ನವೀನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಹೊಸನಗರ ತಾಲ್ಲೂಕು ಕಸಾಪ ಅಧ್ಯಕ್ಷ ನಾಗರಕೋಡಿಗೆ ಗಣೇಶಮೂರ್ತಿ, ಪದಾಧಿಕಾರಿಗಳಾದ ಡಿ.ಗಣೇಶ್, ಹುಚ್ಚರಾಯಪ್ಪ, ಮಧುಸೂದನ್ ಐತಾಳ್, ಕೃಷ್ಣಮೂರ್ತಿ ಹಿಳ್ಳೋಡಿ, ಭಾರತಿ ರಾಮಕೃಷ್ಣ, ಅನುರಾಧ, ಮಂಜುನಾಥ ಕಾಮತ್, ಬಾಲರಾಜ್, ಜಿ.ವಿ.ಸಂಗಮೇಶ್ವರ, ಮಾರ್ಷಲ್ ಶರಾಂ ಉಪಸ್ಥಿತರಿದ್ದರು.
ಸಮ್ಮೇಳನದ ವಿಶೇಷತೆಗಳು:* 4 ಸಾವಿರ ಪ್ರತಿನಿಧಿಗಳ ನೋಂದಣಿ* 10ಕ್ಕು ಹೆಚ್ಚು ಗೋಷ್ಠಿಗಳು* 25ಕ್ಕು ಹೆಚ್ಚು ಮಳಿಗೆಗಳು*ನಾಡಿನ ಪ್ರಸಿದ್ಧ ಸಾಹಿತಿಗಳು, ಚಲನಚಿತ್ರ ನಟರು ಭಾಗಿ
* ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಸಂವಾದ* ವಿವಿಧ ಚಲನಚಿತ್ರ ನಟರು ಭಾಗಿ
* ಅಮೂಲ್ಯ ನಾಣ್ಯಗಳು ಹಾಗೂ ಛಾಯಾಚಿತ್ರ ಪ್ರದರ್ಶನ