ಸಾರಾಂಶ
ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ನಾಡಿನ ಹಲವು ಸಾಹಿತಿಗಳು, ವಿದ್ವಾಂಸರು ಕನ್ನಡ ಪರ ಸಂಘಟನೆಯವರು, ರೈತರು, ಸರ್ಕಾರಿ ನೌಕರರು ಎಲ್ಲರನ್ನೂ ಒಳಗೊಂಡಂತೆ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ಮಾ.೧೮, ೧೯ರಂದು 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಆಚರಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಹರಿಹರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತೀರ್ಮಾನಿಸಿದ್ದು, ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರೊ.ಸಿ.ವಿ.ಪಾಟೀಲ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.ನಗರದ ಎಸ್.ಜೆ.ವಿ.ಪಿ. ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಹರಿಹರದಲ್ಲಿ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ನಾಡಿನ ಹಲವು ಸಾಹಿತಿಗಳು, ವಿದ್ವಾಂಸರು ಕನ್ನಡ ಪರ ಸಂಘಟನೆಯವರು, ರೈತರು, ಸರ್ಕಾರಿ ನೌಕರರು ಎಲ್ಲರನ್ನೂ ಒಳಗೊಂಡಂತೆ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗುತ್ತದೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ ರಾಘವೇಂದ್ರ ನಾಯರಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮ ಮತ್ತು ಅದರ ಕಟ್ಟುಪಾಡುಗಳ ಅನ್ವಯದಂತೆ ಈಗಾಗಲೇ ಜಿಲ್ಲೆಯ ವಿವಿಧ ನಗರ ಮತ್ತು ಗ್ರಾಮಗಳಲ್ಲಿ ಜಿಲ್ಲಾ ಮತ್ತು ತಾಲೂಕು ಸಮ್ಮೇಳನ ಮಾಡುವುದರೊಂದಿಗೆ ೨೦೦ಕ್ಕೂ ಹೆಚ್ಚು ಶಾಲಾ ಅಂಗಳ ಮತ್ತು ಇತರೆಡೆ ದತ್ತಿ ಉಪನ್ಯಾಸ ಕಾರ್ಯಕ್ರಮ ಮಾಡಿದ್ದು, ಅದರಂತೆ ಹರಿಹರದಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಚ್.ಹೂಗಾರ್, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ತಾಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಮರಿಯೋಜಿರಾವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್ ಇತರರು ಮಾತನಾಡಿದರು.