ಸವಲತ್ತು ವಿತರಣೆಗೆ ಜಿಲ್ಲಾ ಮಟ್ಟದ ಸಮಾವೇಶ

| Published : Jan 21 2025, 12:31 AM IST

ಸಾರಾಂಶ

ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಟ್ರ್ಯಾಕ್ಟರ್, ಬಿತ್ತನೆ ಬೀಜ, ಕೃಷಿ ಪರಿಕರ ಮುಂತಾದ ಸೌಲಭ್ಯಗಳನ್ನು ಪ್ರತ್ಯೇಕವಾಗಿ ತಾಲ್ಲೂಕು ಮಟ್ಟದಲ್ಲಿ ವಿತರಿಸುವ ಬದಲು ಜಿಲ್ಲಾ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಫಲಾನುಭವಿಗಳ ಸೌಲಭ್ಯ ವಿತರಣಾ ಸಮಾವೇಶವನ್ನು ಏರ್ಪಡಿಸಿ ವಿತರಿಸಿ.

ಕನ್ನಡಪ್ರಭ ವಾರ್ತೆ ಕೋಲಾರಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುವಾಗ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಅಧಿಕಾರಿಗಳಿಗೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಸವಲತ್ತುಗಳನ್ನು ಸಾಮಾನ್ಯರಿಗೆ ತಲುಪಿಸಬೇಕು, ಹೀಗೆ ವಿತರಿಸುವ ಸವಲತ್ತುಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ಅವರನ್ನು ಕಾರ್ಯಕ್ರಮದಲ್ಲಿ ಒಳಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಸಮಾವೇಶದಲ್ಲಿ ವಿತರಿಸಿ

ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಟ್ರ್ಯಾಕ್ಟರ್, ಬಿತ್ತನೆ ಬೀಜ, ಕೃಷಿ ಪರಿಕರ ಮುಂತಾದ ಸೌಲಭ್ಯಗಳನ್ನು ಪ್ರತ್ಯೇಕವಾಗಿ ತಾಲ್ಲೂಕು ಮಟ್ಟದಲ್ಲಿ ವಿತರಿಸುವ ಬದಲು ಜಿಲ್ಲಾ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಫಲಾನುಭವಿಗಳ ಸೌಲಭ್ಯ ವಿತರಣಾ ಸಮಾವೇಶವನ್ನು ಜರುಗಿಸಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಆ ಮೂಲಕ ಸೌಲಭ್ಯಗಳನ್ನು ವಿತರಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು.ಮುಂದಿನ ಏಪ್ರಿಲ್ ಮಾಹೆಯಲ್ಲಿ ಫಲಾನುಭವಿಗಳ ಸಮಾವೇಶ ಮಾಡಿ ಎಲ್ಲಾ ಫಲಾನುಭವಿಗಳಿಗೆ ಒಂದೇ ವೇದಿಕೆಯಡಿ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ರೇಷ್ಮೆ ಗೂಡಿಗೆ ಸಬ್ಸಿಡಿ ನೀಡಿ ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ಅವರು ಮಾತನಾಡಿ ರೇಷ್ಮೆ ಗೂಡಿಗೆ ಸಬ್ಸಿಡಿ ನೀಡುವ ಕಾರ್ಯಕ್ರಮವನ್ನು ಪುನ: ಅನುಷ್ಠಾನಗೊಳಿಸಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಸಭೆಗೆ ತಿಳಿಸಿದರು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ೧೭ ಜನ ವೈದ್ಯರ ಕೊರತೆ ಇದೆ. ಪ್ರಸ್ತುತ ಪಶುವೈದ್ಯರನ್ನು ಹೊರಗುತ್ತಿಗೆ ಆಧಾರದ ಮೇಲೆ ತುಂಬಲು ಸರ್ಕಾರದಿಂದ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಪ್ರಸ್ತಾವನೆಯ ಪ್ರತಿಯನ್ನು ಸಲ್ಲಿಸುವಂತೆ ತಿಳಿಸಿದ ಸಚಿವರು, ಶೀಘ್ರವಾಗಿ ಮಂಜೂರಾತಿಗೆ ಕ್ರಮವಹಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಅನಕ್ಷರಸ್ಥರ ಗುರುತಿಸಿ

ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಅನಕ್ಷರಸ್ಥರಿದ್ದಾರೆ. ಮುಂದಿನ ಸಭೆಯೊಳಗೆ ಎಲ್ಲಾ ವಯಸ್ಕ ಅನಕ್ಷರಸ್ಥರನ್ನು ಗುರುತಿಸಿ ಪಟ್ಟಿ ಮಾಡಿ ಅವರುಗಳನ್ನು ವಯಸ್ಕರ ಶಿಕ್ಷಣದಡಿಯಲ್ಲಿ ತರಬೇಕು ಎಂದು ತಾಕೀತು ಮಾಡಿದರು.

ಪೌರಾಯುಕ್ತಾಲಯದಲ್ಲಿ ಕೋಲಾರ ಸಿಎಂಸಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಇತರ ಸಿಎಂಸಿ ಯಲ್ಲಿ ನಿಯೋಜಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೋಲಾರ ಶಾಸಕರು ಈ ಕೂಡಲೇ ಇತರ ಸಿಎಂಸಿ ಗಳಲ್ಲಿ ನಿಯೋಜಿಸಿರುವ ಸಿಬ್ಬಂದಿಯನ್ನು ವಾಪಸ್ಸು ಕರೆಸಿ ಆಯಾ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸುವಂತೆ ಕೋರಿದರು.

ಶಾಸಕರಾದ ವೆಂಕಟಶಿವಾರೆಡ್ಡಿ, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅನೀಫ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಸ್‌ಪಿ ಬಿ.ನಿಖಿಲ್, ಜಿಪಂ ಸಿಇಓ ಪ್ರವೀಣ್.ಪಿ ಬಾಗೇವಾಡಿ, ಉಪ ಕಾರ್ಯದರ್ಶಿ ಶಿವಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಜಂಟಿ ಕೃಷಿ ನಿರ್ದೇಶಕಿ ಎಂ.ಆರ್.ಸುಮ ಇದ್ದರು.