15ರಂದು 2 ಕಡೆ ಜಿಲ್ಲಾಮಟ್ಟದ ಉದ್ಯೋಗ ಮೇಳ: ಡಿಸಿ

| Published : Mar 12 2025, 12:46 AM IST

15ರಂದು 2 ಕಡೆ ಜಿಲ್ಲಾಮಟ್ಟದ ಉದ್ಯೋಗ ಮೇಳ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಮಾ.15ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, 5 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕ್ಕಾಗಿ 50ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗಿಯಾಗಲಿವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- 50ಕ್ಕೂ ಹೆಚ್ಚು ಕಂಪನಿ, 5 ಸಾವಿರ ಉದ್ಯೋಗಕ್ಕಾಗಿ ಸಂದರ್ಶನ । ಹದಡಿ ರಸ್ತೆ ಸರ್ಕಾರಿ ಐಟಿಐ ಕಾಲೇಜು, ಬಿಐಇಟಿ ಕಾಲೇಜಲ್ಲಿ ಆಯೋಜನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಮಾ.15ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, 5 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕ್ಕಾಗಿ 50ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗಿಯಾಗಲಿವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ನಗರದ ಹದಡಿ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಹಾಗೂ ಬಿಐಇಟಿ ಕಾಲೇಜಿನಲ್ಲಿ ಏಕಕಾಲಕ್ಕೆ 2 ಕಡೆ ಆಯೋಜಿಸಲಾಗಿದೆ ಎಂದರು.

ಬಿಐಇಟಿ ಕಾಲೇಜಿನಲ್ಲಿ ಬಿಇ ಹಾಗೂ ಎಂಬಿಎ ಪದವಿ ಪಡೆದ ಅಭ್ಯರ್ಥಿಗಳ ಆಯ್ಕೆ ನಡೆದರೆ, ಸರ್ಕಾರಿ ಐಟಿಐ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗಾಗಿ ವಿವಿಧ 5 ಸಾವಿರ ಹುದ್ದೆಗಳಿಗಾಗಿ 50ಕ್ಕೂ ಹೆಚ್ಚು ಕಂಪನಿಗಳು ಸಂದರ್ಶನ ನಡೆಸಲಿವೆ. ಈಗಾಗಲೇ 50ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಿವೆ. ಜಿಲ್ಲೆಯ ನಿರುದ್ಯೋಗಿಗಳು, ಪದವೀಧರ ನಿರುದ್ಯೋಗಿಗಳು, ಪದವೀಧರರಿಗೆ ಇದೊಂದು ಸುವರ್ಣಾವಕಾಶ. ಮೇಳದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಕಂಪನಿಗಳು ಪಾಲ್ಗೊಳ್ಳುತ್ತಿವೆ ಎಂದು ತಿಳಿಸಿದರು.

ಸಾವಿರಕ್ಕೂ ಅಧಿಕ ಯುವಕ- ಯುವತಿಯರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದ್ದು, ಎಲ್ಲ ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಮೇಳದ ನಿಗದಿತ ಸ್ಥಳದಲ್ಲಿ ಅಭ್ಯರ್ಥಿಗಳು ಹಾಜರಾಗಬೇಕು. ಅಭ್ಯರ್ಥಿಗಳಿಗೆ ಅಗತ್ಯ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 6 ಸಾವಿರಕ್ಕಿಂತಲೂ ಹೆಚ್ಚು ಪದವಿ, ಡಿಪ್ಲೊಮಾ ಕೋರ್ಸ್ ಪಾಸಾದವರಿಗೆ ಯುವನಿಧಿಯಡಿ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಈ ಎಲ್ಲರಿಗೂ ಎಸ್‌ಎಂಎಸ್‌ ಮೂಲಕ ಮೇಳದ ಮಾಹಿತಿ ನೀಡಲಾಗಿದೆ. ವಲಸೆ ತಡೆದು ಸ್ಥಳೀಯವಾಗಿ ಉದ್ಯೋಗ ದೊರಕಿಸುವ ಸಲುವಾಗಿಯೇ ಉದ್ಯೋಗ ಮೇಳ ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.

ಈಗಾಗಲೇ ** https://tinyurl.com/mnm8vykz ** ಜಾಲತಾಣದಲ್ಲಿ ಆನ್‍ಲೈನ್ ಮೂಲಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಸಂದರ್ಶನಕ್ಕಾಗಿ 40 ಕೊಠಡಿ ಕಾಯ್ದಿರಿಸಲಾಗಿದೆ. ಸ್ವಚ್ಛತೆ, ಕುಡಿಯುವ ನೀರು, ಆರೋಗ್ಯ ಸುರಕ್ಷತೆ, ಲಘು ಉಪಾಹಾರ ಸೇರಿದಂತೆ ಎಲ್ಲ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.

ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಇತರೆ ಅಧಿಕಾರಿಗಳು ಇದ್ದರು.

- - -

ಬಾಕ್ಸ್‌ * 5 ದಿನಗಳ ಮಾಸಿಕ ಸಂತೆ: ಸಿಇಒ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಉದ್ಯೋಗ ಮೇಳದ ಜೊತೆಗೆ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಮಾ.15ರಿಂದ 5 ದಿನಗಳ ಕಾಲ 20 ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿರುವ ವಸ್ತುಗಳ ಮಾರಾಟಕ್ಕಾಗಿ ಮಾಸಿಕ ಸಂತೆ ಏರ್ಪಡಿಸಲಾಗಿದೆ. ಮಾ.14 ಮತ್ತು 15ರಂದು ಎಲ್ಲ ಬ್ಯಾಂಕ್‍ ಮೂಲಕ ನಾಗರೀಕರಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ನೋಂದಾಯಿಸಲು ಬೃಹತ್ ಶಿಬಿರ ಮಾಡಲಾಗುತ್ತಿದೆ. ಎರಡೂ ವಿಮೆ ಮಾಡಿಸುವುದರಿಂದ ಅಪಘಾತ, ಮರಣ ಹೊಂದಿದಾಗ ಪರಿಹಾರ ಸಿಗಲಿದೆ ಎಂದರು.

- - - -11ಕೆಡಿವಿಜಿ8:

ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಜಿಪಂ ಸಿಇಒ ಸುರೇಶ ಬಿ.ಇಟ್ನಾಳ ಮತ್ತಿತರರು ಇದ್ದರು.