ಸಾರಾಂಶ
ಎರಡನೇ ವರ್ಷದ ಜಿಲ್ಲಾ ಮಟ್ಟದ ಕೆಸರು ಗದ್ದೆ ವಾಲಿಬಾಲ್ ಪಂದ್ಯಾಟ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ ಈಚೆಗೆ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಆಲೆಕಟ್ಟೆ ಬಳಿಯ ಏಕದಂತ ಸೇವಾ ಸಮಿತಿ ಮತ್ತು ಯುವಕ ಸಂಘದ ವತಿಯಿಂದ ಎರಡನೇ ವರ್ಷದ ಜಿಲ್ಲಾ ಮಟ್ಟದ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ ಈಚೆಗೆ ನಡೆಯಿತು.ಶಾಸಕ ಡಾ. ಮಂತರ್ ಗೌಡ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಗ್ರಾಮೀಣ ಕ್ರೀಡೆಯಾದ ಕೆಸರುಗದ್ದೆ ಕ್ರೀಡಾಕೂಟ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮಕ್ಕಳಲ್ಲೂ ಕ್ರೀಡೆ ಮತ್ತು ಕೃಷಿಯ ಬಗ್ಗೆ ಆಸಕ್ತಿ ಮೂಡುತ್ತದೆ. ಪ್ರತಿವರ್ಷ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕೆಸರುಗದ್ದೆ ಕ್ರೀಡಾಕೂಟಗಳು ಹಬ್ಬದ ರೀತಿಯಲ್ಲಿ ನಡೆಯಬೇಕು. ಈ ಬಗ್ಗೆ ರೈತಾಪಿ ವರ್ಗ ಗಮನಹರಿಸಬೇಕು ಎಂದು ಹೇಳಿದರು.ಇದೇ ಸಂದರ್ಭ ನಿವೃತ್ತ ಶಿಕ್ಷಕರಾದ ಬೆಂಕಳ್ಳಿ ಗ್ರಾಮದ ಅಪ್ಪಯ್ಯ ಹಾಗು ಹೆಗ್ಗಡಮನೆ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಕೆ.ಸಿ. ಶ್ರೇಯ, ಎ.ಎಸ್.ಅಂಚಲ್, ಡಿ.ಜಿ. ಗಾನವಿ ಹಾಗು ಕೆ.ಎ.ಸಿಂಚನ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಯುವಕ ಸಂಘದ ಅಧ್ಯಕ್ಷ ಬಿ.ಜಿ. ಪರಮೇಶ್, ಉಪಾಧ್ಯಕ್ಷ ತಮ್ಮಯ್ಯ, ಸೇವಾ ಸಮಿತಿ ಅಧ್ಯಕ್ಷ ಮುಕುಂದ, ಪದಾಧಿಕಾರಿ ಕಾರ್ಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ತಾಲೂಕು ಯುವ ಘಟಕದ ಅಧ್ಯಕ್ಷ ಕಿರಣ್ ಉದಯಶಂಕರ್, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಚೇತನ್ ಸೇರಿದಂತೆ ಹಲವರು ಇದ್ದರು. ಪುರುಷರಿಗೆ ಜಿಲ್ಲಾ ಮಟ್ಟದ ಕೆಸರುಗದ್ದೆ ವಾಲಿಬಾಲ್ ಹಾಗು ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.