ಸರ್ಕಾರಿ ನೌಕರರ ಕೊಡಗು ಜಿಲ್ಲಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಶುಕ್ರವಾರ ಜ.9ರಂದು ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ.ಅರುಣ್‌ಕುಮಾರ್ ತಿಳಿಸಿದರು.

ಮಡಿಕೇರಿ: ಸರ್ಕಾರಿ ನೌಕರರ ಕೊಡಗು ಜಿಲ್ಲಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಶುಕ್ರವಾರ ಜ.9ರಂದು ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ.ಅರುಣ್‌ಕುಮಾರ್ ತಿಳಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಸ್ಪರ್ಧೆಗಳನ್ನು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ. ಶಾಸಕರಾದ ಡಾ.ಮಂತರ್ ಗೌಡ, ಎ.ಎಸ್.ಪೊನ್ನಣ್ಣ, ಸಂಸದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಎಂಎಲ್‌ಸಿ ಸುಜಾ ಕುಶಾಲಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು ಎಂದು ತಿಳಿಸಿದರು.

11ರ ತನಕ ನಡೆಯುವ ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಮಡಿಕೇರಿ ತಾಲೂಕಿನಿಂದ 225, ಸೋಮವಾರಪೇಟೆ ತಾಲೂಕಿನಿಂದ 184 ಹಾಗೂ ವಿರಾಜಪೇಟೆ ತಾಲೂಕಿನಿಂದ 115 ಮಂದಿ ಸೇರಿ 524 ನೌಕರರು ನೋಂದಾಯಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆ ತನಕವೂ ನೋಂದಾವಣಿಗೆ ಅವಕಾಶ ಕಲ್ಪಿಸಲಾಗಿದ್ದು 700- 1000 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವ ಸ್ಪರ್ಧಿಗಳು ತಮ್ಮ ತಾಲೂಕಿಗೆ ಅನುಗುಣವಾಗಿ ಪಥಸಂಚಲನದಲ್ಲಿ ಭಾಗವಹಿಸಬೇಕು. ಶುಕ್ರವಾರ ಸ್ಪರ್ಧೆಗಳ ಉದ್ಘಾಟನೆ, ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ. ಶನಿವಾರ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಭಾನುವಾರ ಷೆಟಲ್, ಬ್ಯಾಡ್ಮಿಂಟನ್, ಚೆಸ್, ಕೇರಂ, ಟೇಬಲ್ ಟೆನ್ನಿಸ್ ಸೇರಿದಂತೆ ಒಳಾಂಗಣ ಕ್ರೀಡೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಜಿ.ಸಂದೀಪ್, ಖಜಾಂಚಿ ಪಿ.ಡಿ.ರಾಜೇಶ್ ಹಾಗೂ ರಾಜ್ಯ ನಿರ್ದೇಶಕ ಪಿ.ಎಂ.ಬಾಬು ಇದ್ದರು.