4 ರಂದು ಜಿಲ್ಲಾ ಮಟ್ಟದ ಯುವ ಜನೋತ್ಸವ

| Published : Dec 01 2024, 01:30 AM IST

ಸಾರಾಂಶ

15 ರಿಂದ 29 ವರ್ಷ ವಯೋಮಿತಿಯ ಒಳಗೆ ಇರುವ ಜಿಲ್ಲೆಯ ಯುವಕ, ಯುವತಿಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿಯಾಗಿರುವ ಯುವಕ, ಯುವತಿ ಸಂಘಗಳು ಹಾಗೂ ಮಂಡಳಿಗಳ ಪದಾಧಿಕಾರಿಗಳು ಭಾಗವಹಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಡಿ.4 ರಂದು ಮೈಸೂರು ಜಿಲ್ಲಾ ಮಟ್ಟದ ಯುವಜನೋತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ್ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೆಂದ್ರ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ಸೇರಿದಂತೆ 11 ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

15 ರಿಂದ 29 ವರ್ಷ ವಯೋಮಿತಿಯ ಒಳಗೆ ಇರುವ ಜಿಲ್ಲೆಯ ಯುವಕ, ಯುವತಿಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿಯಾಗಿರುವ ಯುವಕ, ಯುವತಿ ಸಂಘಗಳು ಹಾಗೂ ಮಂಡಳಿಗಳ ಪದಾಧಿಕಾರಿಗಳು ಭಾಗವಹಿಸಬಹುದಾಗಿದೆ ಎಂದರು.

ವಿಷಯಾಧಾರಿತ ಸ್ಪರ್ಧೆ- ವಿಜ್ಞಾನ ಮೇಳ, ಜಾನಪದ ನೃತ್ಯ (ಗುಂಪು), ಜಾನಪದ ಗೀತೆ (ಗುಂಪು), ಜಾನಪದ ನೃತ್ಯ (ವೈಯಕ್ತಿಕ), ಜಾನಪದ ಗೀತೆ (ವೈಯಕ್ತಿಕ), ಜೀವನ ಕೌಶಲ ಸ್ಪರ್ಧೆ-ಕವಿತೆ ಬರೆಯುವುದು (ವೈಯಕ್ತಿಕ) ಕಥೆ ಬರೆಯುವುದು, ಚಿತ್ರಕಲೆ (ವೈಯಕ್ತಿಕ), ಭಾಷಣಾ (ವೈಯಕ್ತಿಕ), ಛಾಯಾಗ್ರಹಣ ಕಾರ್ಯಾಗಾರ ಮತ್ತು ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಇದೇ ಮೊದಲ ಬಾರಿ ಯುವ ಕೃತಿ ಅಡಿಯಲ್ಲಿ ಗುಡಿ ಕೈಗಾರಿಕೆಯ ಕಲಾ ಪ್ರಕಾರ, ನೇಕಾರಿಕೆ/ ಜವಳಿ, ಕೃಷಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿದೆ. ಈ ವಿಭಾಗಕ್ಕೆ ಸ್ಪರ್ಧೆ ಇರುವುದಿಲ್ಲ. ಈ ಕಲಾ ಪ್ರಕಾರಗಳನ್ನು ಉತ್ತೇಜಿಸುವ ಸಲುವಾಗಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದವರು 2024- 25ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಜಿಲ್ಲಾ ಮಟ್ಟದ ಸ್ಪರ್ಧಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನಾಗಿ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ನೀಡಲಾಗುತ್ತದೆ ಎಂದರು.

ಯುವಜನೋತ್ಸವಕ್ಕೆ ನೋಂದಣಿಯಾಗಲು ಆನ್‌ ಲೈನ್ ಹಾಗೂ ಆಫ್‌ ಲೈನ್‌ ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಆನ್‌ ಲೈನ್‌ ನಲ್ಲಿ ಗೂಗಲ್ ಫಾರ್ಮ್ ಭರ್ತಿ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಆಫ್‌ ಲೈನ್ ನೋಂದಣಿ ಮಾಡಿಕೊಳ್ಳುವವರು ಸ್ಥಳದಲ್ಲೇ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ. 0821- 2564179 ಸಂಪರ್ಕಿಸಬಹುದು ಎಂದರು.

ನೆಹರು ಯುವ ಕೇಂದ್ರದ ಅಧಿಕಾರಿ ಅಭಿಷೇಕ ಚವರೆ, ಮೈಸೂರು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ಎಂ.ಬಿ. ಸುರೇಶ್ ಇದ್ದರು.