ಕನ್ನಡ ಸಾಹಿತ್ಯಕ್ಕೆ 5ನೇ ಜ್ಞಾನಪೀಠ ಪ್ರಶಸ್ತಿ ತಂದಿರುವ ಡಾ. ವಿನಾಯಕ ಕೃಷ್ಣ ಗೋಕಾಕರ ಜನ್ಮಸ್ಥಳ, ಜಗತ್ ಪ್ರಸಿದ್ಧ ದೊಡ್ಡ ಹುಣಸೇ ಮರಗಳನ್ನು ಹೊಂದಿ ಪ್ರವಾಸಿ ತಾಣವಾಗಿರುವ ಸವಣೂರ ಪಟ್ಟಣದ ದೊಡ್ಡ ಹುಣಸೇ ಕಲ್ಮಠದ ಆವರಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜ. 24, 25ರಂದು ನಡೆಯುವ ಹಾವೇರಿ ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಶಿವರಾಜ ಯಲವಿಗಿಕನ್ನಡಪ್ರಭ ವಾರ್ತೆ ಸವಣೂರುಕನ್ನಡ ಸಾಹಿತ್ಯಕ್ಕೆ 5ನೇ ಜ್ಞಾನಪೀಠ ಪ್ರಶಸ್ತಿ ತಂದಿರುವ ಡಾ. ವಿನಾಯಕ ಕೃಷ್ಣ ಗೋಕಾಕರ ಜನ್ಮಸ್ಥಳ, ಜಗತ್ ಪ್ರಸಿದ್ಧ ದೊಡ್ಡ ಹುಣಸೇ ಮರಗಳನ್ನು ಹೊಂದಿ ಪ್ರವಾಸಿ ತಾಣವಾಗಿರುವ ಸವಣೂರ ಪಟ್ಟಣದ ದೊಡ್ಡ ಹುಣಸೇ ಕಲ್ಮಠದ ಆವರಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜ. 24, 25ರಂದು ನಡೆಯುವ ಹಾವೇರಿ ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಪಟ್ಟಣದ ರಾಜ್ಯ ಹೆದ್ದಾರಿಯ ವಿಭಜಕಗಳ ಮಧ್ಯದಲ್ಲಿರುವ ವಿದ್ಯುತ್‌ದೀಪದ ಕಂಬಗಳಿಗೆ ಕನ್ನಡ ಬಾವುಟಗಳು ಹಾಗೂ ತೋರಣಗಳಿಂದ ಸಿಂಗರಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಮ್ಮೇಳದ ವೇದಿಕೆ ಸ್ಥಳದ ವರೆಗೆ, ವೇದಿಕೆ ಸ್ಥಳದಿಂದ ಗೋಕಾಕ ವೃತ್ತದ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸಮ್ಮೇಳನಕ್ಕೆ ಸ್ವಾಗತಿಸಲು ಎರಡು ಪ್ರತ್ಯೇಕ ಬೃಹದ್ದಾಕಾರದ ಮಹಾದ್ವಾರಗಳನ್ನು ನಿರ್ಮಿಸಿ ದ್ವಾರಗಳಿಗೆ ದಿ.ರಾಜಶೇಖರ ಜಿ.ಸಿಂಧೂರ ಹಾಗೂ ದಿ.ಮೋಹನ ಮೆಣಸಿನಕಾಯಿ ಎಂದು ನಾಮಕರಣ ಮಾಡಲಾಗಿದೆ. ವೇದಿಕೆ ಮುಂಭಾಗದಲ್ಲಿ ಸುಮಾರು 3 ಎಕರೆ ವಿಸ್ತೀರ್ಣದಲ್ಲಿ 35 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ.ಸಮ್ಮೇಳನ ಜರುಗುವ ದೊಡ್ಡಹುಣಸೇ ಕಲ್ಮಠದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಸುಮಾರು 700ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ಡಾ. ವಿ.ಕೃ. ಗೋಕಾಕರ ಹೆಸರಿಡಲಾಗಿದೆ. ವೇದಿಕೆ ಪಕ್ಕದಲ್ಲಿಯೇ ಊಟ-ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಭೋಜನದ ಸ್ಥಳಕ್ಕೆ ತೆರಳುವ ಮಾರ್ಗದ ದ್ವಾರಕ್ಕೆ ಸಾಹಿತಿ ಎನ್.ಎಸ್. ಜೋಷಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ಚಹಾ ಮಧ್ಯಾಹ್ನದ ಭೋಜನದಲ್ಲಿ ಗೋದಿ ಹುಗ್ಗಿ, ಎರಡು ತರಹದ ಪಲ್ಯಗಳೊಂದಿಗೆ ಜೋಳದ ರೊಟ್ಟಿ, ಅನ್ನ ಸಾಂಬಾರ ವ್ಯವಸ್ಥೆ ಮಾಡಲಾಗಿದೆ.ಸಮ್ಮೇಳದ ಧ್ವಜಾರೋಹಣ: ಬೆಳಗ್ಗೆ 7.30ಕ್ಕೆ ವೇದಿಕೆ ಮುಂಭಾಗದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ರಾಷ್ಟ ಧ್ವಜಾರೋಹಣ ನೆರವೇರಿಸಲಿದ್ದು, ನಾಡ ಧ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಚಂದ್ರಗೌಡ ಎಸ್. ಪಾಟೀಲ ಕೈಗೊಳ್ಳಲಿದ್ದು, ಕಸಾಪ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶುಭಂ ಶುಕ್ಲ, ತಹಸೀಲ್ದಾರ್ ರವಿಕುಮಾರ್ ಕೊರವರ, ತಾ.ಪಂ ಇ.ಒ ಬಿ.ಎಸ್. ಶಿಡೇನೂರ, ಬಿ.ಇ.ಒ ಎಂ.ಎಫ್ ಬಾರ್ಕಿ, ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಉಪಸ್ಥಿತರಿರುವರು. ಸಮ್ಮೇಳನದ ಮೆರವಣಿಗೆ: ಬೆಳಗ್ಗೆ 8.30ಕ್ಕೆ ಶ್ರೀ ಭರಮಲಿಂಗೇಶ್ವರ ವೃತ್ತದಿಂದ ವಿವಿಧ ಕಲಾ ತಂಡಗಳೊಂದಿಗೆ ಸಾರೋಟದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಆರಂಭಗೊಂಡು, ಮಾರುಕಟ್ಟೆ ರಸ್ತೆ, ಸಿಂಪಿಗಲ್ಲಿ ವೃತ್ತದಿಂದ ಸರಕಾರಿ ಆಸ್ಪತ್ರೆ ಮಾರ್ಗದ ಮೂಲಕ ವೇದಿಕೆ ಸ್ಥಳಕ್ಕೆ ಸಮಾರೋಪಗೊಳ್ಳಲಿದೆ. ನಂತರ ಸಮ್ಮೇಳನ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.