ಫೆ. ೧೧ರಿಂದ ಎರಡು ದಿನ ಜಿಲ್ಲಾ ಸಾಹಿತ್ಯ ಸಮ್ಮೇಳನ

| Published : Feb 09 2024, 01:46 AM IST

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಫೆ. ೧೧ ಮತ್ತು ೧೨ರಂದು ರಾಣಿಬೆನ್ನೂರು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಸಮ್ಮೇಳಾಧ್ಯಕ್ಷರ ಮೆರವಣಿಗೆ, ವಿವಿಧ ಗೋಷ್ಠಿ, ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಫೆ. ೧೧ ಮತ್ತು ೧೨ರಂದು ರಾಣಿಬೆನ್ನೂರು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಸಮುದಾಯ ಭವನದಲ್ಲಿ ನಿರ್ಮಿಸಿದ ನಿಜಶರಣ ಅಂಬಿಗರ ಚೌಡಯ್ಯ, ಹೆಳವನಕಟ್ಟೆ ಗಿರಿಯಮ್ಮ, ಹಾನಗಲ್ಲ ಕುಮಾರ ಶಿವಯೋಗಿಗಳ ಪ್ರಧಾನ ವೇದಿಕೆಯಲ್ಲಿ ವಿಜೃಂಭಣೆಯಿಂದ ಸಮಾರಂಭ ಜರುಗಲಿದೆ. ಫೆ. ೧೧ರಂದು ಬೆಳಗ್ಗೆ ೭.೩೦ಕ್ಕೆ ಧ್ವಜಾರೋಹಣ, ೮ ಗಂಟೆಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ವೇದಿಕೆ ವರೆಗೆ ಸಮ್ಮೇಳಾಧ್ಯಕ್ಷ ಜಿ.ಎಂ. ಮಠದ ಅವರ ಮೆರವಣಿಗೆ ಜರುಗಲಿದೆ. ಆನಂತರ ಸಮ್ಮೇಳನದ ಉದ್ಘಾಟನೆ ಸಮಾರಂಭ ಜರುಗಲಿದ್ದು, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಬಸವರಾಜ ಶಿವಣ್ಣನವರ, ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ವಿಪ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್ ಅವರು ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸುವರು. ಚಿಕ್ಕಮಗಳೂರಿನ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡುವರು ಎಂದು ತಿಳಿಸಿದರು.

ಒಟ್ಟು ೯ ಗೋಷ್ಠಿಗಳು ಸಮ್ಮೇಳನದಲ್ಲಿ ಜರುಗಲಿವೆ. ಮಧ್ಯಾಹ್ನ ೧ ಗಂಟೆಗೆ ಕನ್ನಡ-ಕರ್ನಾಟಕ-ವೈಭವ ಗೋಷ್ಠಿ, ಮಧ್ಯಾಹ್ನ ೨.೩೦ಕ್ಕೆ ಜಿಲ್ಲೆಯ ಗತ-ವೈಭವ ಗೋಷ್ಠಿ, ಸಂಜೆ ೪.೩೦ಕ್ಕೆ ಸಮ್ಮೇಳನಾಧ್ಯಕ್ಷರ ಜೀವನ-ಸಾಧನೆ ಗೋಷ್ಠಿ, ೫ ಗಂಟೆಗೆ ಕವಿಗಳ ಕಲರವ ಗೋಷ್ಠಿ ನಡೆಯಲಿವೆ. ರಾತ್ರಿ ೭ ಗಂಟೆಗೆ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಜರುಗಲಿದ್ದು, ವಿವಿಧ ಕಲಾತಂಡದವರು ನೃತ್ಯ, ಭರತನಾಟ್ಯ ಪ್ರದರ್ಶನ ಮಾಡಲಿದ್ದಾರೆ ಎಂದರು.

ಫೆ. ೧೨ರಂದು ಬೆಳಗ್ಗೆ ೯ ಗಂಟೆಗೆ ಚಿಣ್ಣರ ಚಿಲಿಪಿಲಿ ಗೋಷ್ಠಿ, ಬೆಳಗ್ಗೆ ೧೦.೩೦ಕ್ಕೆ ನಾರಿಶಕ್ತಿ-ಧೀಶಕ್ತಿ ಗೋಷ್ಠಿ, ಮಧ್ಯಾಹ್ನ ೧೨ ಗಂಟೆಗೆ ದಮನಿತರ ಆಸ್ಮಿತೆ ಗೋಷ್ಠಿ, ೧.೩೦ಕ್ಕೆ ವೈವಿಧ್ಯ ಗೋಷ್ಠಿ, ೩.೩೦ಕ್ಕೆ ಕೃಷಿ ಸೌರಭ ಗೋಷ್ಠಿ ಜರುಗಲಿವೆ. ಸಂಜೆ ೪.೩೦ಕ್ಕೆ ಬಹಿರಂಗ ಅಧಿವೇಶನ ಜರುಗಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು. ತಾಲೂಕು ಅಧ್ಯಕ್ಷ ವೀರೇಶ ಜಂಬಗಿ ನಿರ್ಣಯ ಮಂಡಿಸುವರು ಎಂದರು.

ಕಸಾಪ ಜಿಲ್ಲಾ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡ್ರ, ಕಸಾಪ ತಾಲೂಕು ಕಾರ್ಯದರ್ಶಿ ವೀರಣ್ಣ ಬೆಳವಡಿ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಭು ಹಿಟ್ನಳ್ಳಿ, ಪೃಥ್ವಿರಾಜ ಬೇಟಗೇರಿ ಇದ್ದರು.

ಫೆ. ೧೨ಕ್ಕೆ ಸಮಾರೋಪ ಸಮಾರಂಭ: ಫೆ. ೧೨ರಂದು ಸಂಜೆ ೫.೩೦ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಸಮಾರೋಪ ನುಡಿಗಳನ್ನಾಡುವರು. ರಾತ್ರಿ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಕಸಾಪ ಜಿಲ್ಲಾಧ್ಯಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.