ಸರ್ವಜ್ಞನ ನಾಡಲ್ಲಿ ಇಂದಿನಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ

| Published : Jan 10 2025, 12:47 AM IST

ಸರ್ವಜ್ಞನ ನಾಡಲ್ಲಿ ಇಂದಿನಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವಜ್ಞನ ನಾಡು ಹಿರೇಕೆರೂರಲ್ಲಿ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ. ಹಿರೇಕೆರೂರು ಪಟ್ಟಣ ಸಮ್ಮೇಳನದ ಆತಿಥ್ಯ ವಹಿಸಿದ್ದು, ಅತಿಥಿ ಸತ್ಕಾರಕ್ಕೆ ಎಲ್ಲ ರೀತಿಯಿಂದಲೂ ಸಜ್ಜಾಗಿದೆ.

ಹಿರೇಕೆರೂರು: ಸರ್ವಜ್ಞನ ನಾಡು ಹಿರೇಕೆರೂರಲ್ಲಿ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ. ಹಿರೇಕೆರೂರು ಪಟ್ಟಣ ಸಮ್ಮೇಳನದ ಆತಿಥ್ಯ ವಹಿಸಿದ್ದು, ಅತಿಥಿ ಸತ್ಕಾರಕ್ಕೆ ಎಲ್ಲ ರೀತಿಯಿಂದಲೂ ಸಜ್ಜಾಗಿದೆ.

ಪಟ್ಟಣದ ಉದ್ದಕ್ಕೂ ಕನ್ನಡ ಬಾವುಟ, ಪತಾಕೆಗಳು ರಾರಾಜಿಸುತ್ತಿವೆ. ಪಟ್ಟಣ ಆಕರ್ಷಕವಾಗಿ ಸಿಂಗರಿಸಲ್ಪಟ್ಟಿದೆ. ಜ. 10ರಿಂದ ಎರಡು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು, ಪಟ್ಟಣದ ಪೊಲೀಸ್ ಮೈದಾನದಲ್ಲಿ ಬೃಹತ್ ವೇದಿಕೆ ಮತ್ತು ಆಸನದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ತುಂಬೆಲ್ಲ ಕನ್ನಡ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ:

ಪಟ್ಟಣದ ಬಿ.ಜಿ. ಶಂಕರರಾವ್ ವೃತ್ತದಿಂದ ಶುಕ್ರವಾರ ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಮ್ಮನವರ ಅವರ ಮೆರವಣಿಗೆಯೊಂದಿಗೆ ನುಡಿಹಬ್ಬಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಕಲಾವೈಭವ ಅನಾವರಣ: ಮೆರವಣಿಗೆಯಲ್ಲಿ ನಾಡಿನ ಸಾಂಸ್ಕೃತಿಕ ಕಲಾವೈಭವ ಅನಾವರಣಗೊಳ್ಳಲಿದೆ. ವಿವಿಧ ಜಿಲ್ಲೆಗಳಿಂದ ಕಲಾ ತಂಡಗಳು ಆಗಮಿಸಲಿದ್ದು, ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಮಾಜಿ ಸೈನಿಕರು ಸೈನಿಕ ಧರಿಸಿನೊಂದಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಗೆ ಮೆರುಗು ನೀಡಲಿದ್ದಾರೆ.

ಪುಸ್ತಕ ಮಳಿಗೆ: ಸಮ್ಮೇಳನಕ್ಕೆ ಆಗಮಿಸುವ ಪುಸ್ತಕ, ಸಾಹಿತ್ಯಾಭಿಮಾನಿಗಳಿಗಾಗಿಯೇ ಪುಸ್ತಕ ಮಳಿಗೆಗಳು ತಲೆ ಎತ್ತಿವೆ. ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಸಹಿತ ನಾನಾ ಭಾಗದ ಸಾಕಷ್ಟು ಪ್ರಕಾಶಕರು ಮಳಿಗೆಗಳನ್ನು ತೆರೆದಿದ್ದಾರೆ. ಈ ಮಳಿಗೆಗಳಲ್ಲಿ ಸುಪ್ರಸಿದ್ಧ ಸಾಹಿತಿಗಳು, ಖ್ಯಾತನಾಮ ಲೇಖಕರ ಪುಸ್ತಕಗಳು ದೊರೆಯಲಿವೆ. ಜತೆಗೆ ವಸ್ತುಪ್ರದರ್ಶನ ಮಳಿಗೆಗಳು, ವಾಣಿಜ್ಯ ಮಳಿಗೆಗಳು ತೆರೆದುಕೊಂಡಿವೆ. ಪುಸ್ತಕ ಮಾರಾಟಗಾರರು, ಪ್ರಕಾಶಕರು ಗುರುವಾರ ಸಂಜೆ ಸಮ್ಮೇಳನ ಸ್ಥಳಕ್ಕೆ ಆಗಮಿಸಿ ತಮ್ಮ ಮಳಿಗೆಗಳಲ್ಲಿ ಪುಸ್ತಕ ಜೋಡಿಸುತ್ತಿದ್ದ ದೃಶ್ಯ ಕಂಡು ಬಂತು.

ಅಲಂಕಾರ: ನಗರದಲ್ಲಿ ದಸರಾ ಮಾದರಿಯಲ್ಲಿ ದೀಪಾಲಂಕಾರ ಮಾಡಲಾಗಿದ್ದು, 2 ದಿನಗಳ ಕಾಲ ಹಿರೇಕೆರೂರು ಪಟ್ಟಣ ಝಗಮಗಿಸಲಿದೆ. ಜತೆಗೆ ಸಮ್ಮೇಳಕ್ಕೆ ಆಗಮಿಸುವ ಅತಿಥಿಗಳ ಸ್ವಾಗತ ಕೋರುವ ಬ್ಯಾನರ್ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.

ಅತಿಥಿ ಸತ್ಕಾರಕ್ಕೆ ಸಜ್ಜು:ಸಮ್ಮೇಳನಕ್ಕೆ ಆಗಮಿಸಿದ ಅತಿಥಿಗಳಿಗೆ ಊಟದ ಸಿದ್ಧತೆ ಮಾಡಲಾಗಿದ್ದು, ಜನಸಾಮಾನ್ಯರಿಗಾಗಿ ಊಟದ ಕೌಂಟರ್ ಗಣ್ಯರು, ಅತಿಮುಖ್ಯ ಗಣ್ಯರಿಗೆ ಪ್ರತ್ಯೇಕವಾಗಿ ಊಟ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಭೋಜನವಿರಲಿದೆ. ಸಂಜೆ ಟೀ-ಕಾಫಿ ಜತೆಗೆ ಲಘು ಉಪಾಹಾರ ವ್ಯವಸ್ಥೆ ಸಹ ಮಾಡಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

ಕರ್ನಾಟಕದ ಭಾಷೆ, ಗಡಿ, ಮಾಧ್ಯಮ, ತಂತ್ರಜ್ಞಾನ, ಮಹಿಳೆಯರ, ಸಾಹಿತ್ಯ ಒಳಗೊಂಡ ಹಲವು ವಿಚಾರಗಳ ಕುರಿತು ಚರ್ಚೆ, ಸಂವಾದ, ಹೊಸ ವಿಚಾರಗಳಿಗೆ ಸಮ್ಮೇಳನ ವೇದಿಕೆಯಾಗಲಿದೆ.