ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಫೆ.24 ಹಾಗೂ 25ರಂದು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದ್ದು, ಅಕ್ಷರ ಜಾತ್ರೆಯೂ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.ನಗರದ ಕಸಾಪ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಅಧ್ಯಕ್ಷರಾಗಿ ಜಿಲ್ಲಾಧಿಕಾರ ಟಿ.ಭೂಬಾಲನ್, ಉಪಾಧ್ಯಕ್ಷರಾಗಿ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಕಾರ್ಯಾಧ್ಯಕ್ಷರಾಗಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಜರುಗಲಿದೆ ಎಂದು ತಿಳಿಸಿದರು.
ಪ್ರಧಾನ ವೇದಿಕೆಗೆ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಮುಖ್ಯ ಮಹಾದ್ವಾರಕ್ಕೆ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ, ಪುಸ್ತಕ ಮಳಿಗೆಗೆ ಜಾನಪದ ಭೀಷ್ಮ ಡಾ.ಶಿಂಪಿ ಲಿಂಗಣ್ಣ, ದಾಸೋಹ ಮನೆಗೆ ಕನ್ನಡಪ್ರೇಮಿ ಡಾ.ಜಯದೇವಿತಾಯಿ ಲಿಗಾಡೆ ಅವರ ಹೆಸರು ಇಡುವ ಮೂಲಕ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸಲಾಗಿದೆ ಎಂದರು.ಮೊದಲ ದಿನದ ಕಾರ್ಯಕ್ರಮಗಳು
ಫೆ.24ರಂದು ಬೆಳಗ್ಗೆ 8ಗಂಟೆಗೆ ರಂಗಮಂದಿರದ ಎದುರಿಗೆ ಧ್ವಜಾರೋಹಣ ಸಮಾರಂಭ ಜರುಗಲಿದೆ. ಬಳಿಕ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮಹಾತ್ಮಾಗಾಂಧಿ ವೃತ್ತದ ಮಾರ್ಗವಾಗಿ ಕಂದಗಲ್ಲ ಹನುಮಂತರಾಯ ರಂಗಮಂದಿರದ ವರೆಗೆ ಮೆರವಣಿಗೆ ಸಾಗಿ ಬರಲಿದೆ. ಬೆಳಗ್ಗೆ 10.30ಕ್ಕೆ ರಂಗಮಂದಿರದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಸಚಿವ ಎಂ.ಬಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಶಿವಾನಂದ ಪಾಟೀಲ ನಾಡದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸಿ.ಎಸ್.ನಾಡಗೌಡ, ಬಸನಗೌಡ ಪಾಟೀಲ ಯತ್ನಾಳ, ಸುನೀಲಗೌಡ ಪಾಟೀಲರು ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಗೋಷ್ಠಿಗಳುಮಧ್ಯಾಹ್ನ 12.30ಕ್ಕೆ 1ನೇ ಗೋಷ್ಠಿ ಕವಿಗೋಷ್ಠಿ ನಡೆಯಲಿದ್ದು, 28 ಕವಿಗಳು ಕವನ ವಾಚಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ 2ನೇ ಗೋಷ್ಠಿ ಶರಣ ಸಾಹಿತ್ಯ ಗೋಷ್ಠಿ ನಡೆಯಲಿದೆ. ಸಂಜೆ 5 ಗಂಟೆಗೆ 3ನೇ ಗೋಷ್ಠಿ ಬಂಡಾಯ ಸಾಹಿತ್ಯ- ನೆಲೆಗಳು ಎಂಬ ಗೋಷ್ಠಿ ನಡೆಯಲಿದೆ. ಗೋಷ್ಠಿಗಳ ಮಧ್ಯದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿವೆ. ಸಂಜೆ 7ಗಂಟೆಗೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಎರಡನೇ ದಿನದ ಕಾರ್ಯಕ್ರಮಗಳು
ಫೆ.25ರ ಬೆಳಗ್ಗೆ 10.30ಕ್ಕೆ 4ನೇ ಗೋಷ್ಠಿ ಮಹಿಳಾಗೋಷ್ಠಿ ಜರುಗಲಿದೆ. ಮಧ್ಯಾಹ್ನ 12.30ಕ್ಕೆ, 5ನೇ ಗೋಷ್ಠಿ ದಾಸ ಸಾಹಿತ್ಯ ಕುರಿತು ಚಿಂತನಾ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ 6 ನೇ ಗೋಷ್ಠಿ ಜಾನಪದ ಸಂಭ್ರಮ ಗೋಷ್ಠಿ ಜರುಗಲಿದೆ. ಸಂಜೆ 4.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು, ಸಂಜೆ 5ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಬಳಿಕ ಸಂಜೆ 6ರಿಂದ ಸಾಂಸ್ಕೃತಿಕ ಕಲರವ. ಈ ವೇಳೆ ಗೌರವ ಸನ್ಮಾನಗಳು ಜರುಗಲಿವೆ.ಫೆ.24 ಹಾಗೂ 25ರಂದು ಬೆಳಗ್ಗೆ 8 ರಿಂದ 11ರ ವರೆಗೆ ಅಲ್ಪೋಪಹಾರ ಇರಲಿದೆ. ಮಧ್ಯಾಹ್ನ 12ರಿಂದ 3ರ ವರೆಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿದೆ. ಹಾಗೂ ಸಂಜೆ 7 ರಿಂದ ರಾತ್ರಿ10ರ ವರೆಗೆ ಊಟದ ವ್ಯವಸ್ಥೆ ಇರಲಿದೆ.
ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್‌ಗೆ ಸುಮಾರು ₹ 50 ಕೋಟಿ ಅನುದಾನ ಬರುತ್ತಿತ್ತು. ಆದರೆ ಹಲವು ಗ್ಯಾರಂಟಿಗಳ ಎಫೆಕ್ಟ್ ನಿಂದಾಗಿ ಅದು ₹ 10 ಕೋಟಿಗೆ ಇಳಿದಿದೆ. ಇನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ₹ 5 ಲಕ್ಷ ಅನುದಾನ ಬರುತ್ತಿತ್ತು. ಕಳೆದ ವರ್ಷ ನಡೆದ 19ನೇ ಸಮ್ಮೇಳನದ ಹಣ ಇನ್ನೂ ಬಂದಿಲ್ಲ. ಬಾಕಿ ಉಳಿದಿರುವ ಹಣ ಬೇಗನೆ ಬರಲಿ ಎಂದು ಹಾಸಿಂಪೀರ ವಾಲೀಕಾರ ಸರ್ಕಾರಕ್ಕೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕಸಾಪ ಪದಾಧಿಕಾರಿಗಳಾದ ಭಾರತಿ ಪಾಟೀಲ, ಮಹಾದೇವ ಗುಡಿ, ಡಾ.ಸಂಗಮೇಶ ಮೇತ್ರಿ, ಸುರೇಶ ಜತ್ತಿ, ಅಭಿಷೇಕ ಚಕ್ರವರ್ತಿ, ಮಹಮ್ಮದ ಗೌಸ ಹವಾಲ್ದಾರ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.ಬಾಕ್ಸ್
ಚನ್ನಬಸವ ಸ್ವಾಮೀಜಿ ಸರ್ವಾಧ್ಯಕ್ಷರುಸಮ್ಮೇಳನದ ಸರ್ವಾಧ್ಯಕ್ಷರಾಗಿ ಇಂಗಳೇಶ್ವರ ವಚನಶಿಲಾ ಮಂಟಪದ ಚನ್ನಬಸವ ಮಹಾಸ್ವಾಮಿಗಳು ಆಯ್ಕೆ ಮಾಡಲಾಗಿದೆ. ಸ್ವಾಮೀಜಿಗಳನ್ನು ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮೀತಿಯಲ್ಲಿಯೇ ಆಯ್ಕೆ ಮಾಡಲಾಗಿದ್ದು, 97ವರ್ಷದ ಚನ್ನಬಸವ ಮಹಾಸ್ವಾಮಿಗಳು ವಚನಶಿಲಾ ಮಂಟಪ ಕಟ್ಟಿದ್ದಾರೆ. ಸುಧೀರ್ಗ 40 ವರ್ಷಗಳಿಂದ ಅವರು ವಚನಗಳನ್ನು ಉಳಿಸಿ, ಬೆಳೆಸುವ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅಂತವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಸಮ್ಮೇಳನಕ್ಕೆ ಘನತೆ ಬಂದಿದೆ ಎಂದು ತಿಳಿಸಿದರು.