ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಈ ವರ್ಷದ ಹಾಸನಾಂಬೆ-ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿ “ಆಗಸದಿಂದ ಹಾಸನ” ಹೆಲಿ ಟೂರಿಸಂ ಪ್ಯಾಕೇಜ್ ಬಂದಿದೆ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಹಾಸನ ನಗರದಲ್ಲಿ ಈ ಪ್ಯಾಕೇಜ್‌ಗೆ ಚಾಲನೆ ನೀಡಿ, ಹಾಸನದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಿದರು.ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾದ ಈ ಹೆಲಿಟೂರ್‌ನ ಉದ್ದೇಶ ತಾಯಿ ಹಾಸನಾಂಬೆ ದೇವಿಯ ಸ್ಥಳ ಪೌರಾಣಿಕತೆ, ದೇವಾಲಯದ ಆಧ್ಯಾತ್ಮಿಕ ಪ್ರಾಮುಖ್ಯತೆ ಮತ್ತು ಹಾಸನದ ಐತಿಹಾಸಿಕ ಸೌಂದರ್ಯವನ್ನು ವಿಶ್ವದ ಮುಂದಿಡುವುದು. ಆಗಸದಿಂದ ಹಾಸನ” ಹೆಲಿ ರೈಡ್‌ನಲ್ಲಿ ಭಾಗವಹಿಸುವವರಿಗೆ ಜಿಲ್ಲೆಯ ಶಿಲ್ಪಕಲೆಯ ಮಾಲೆಗಳು ಕಣ್ತುಂಬ ಸಿಗಲಿವೆ. ಬೇಲೂರು ಮತ್ತು ಹಳೇಬೀಡಿನ ಹೊಯ್ಸಳ ಶಿಲ್ಪ ವೈಭವ, ಶ್ರವಣಬೆಳಗೊಳದ ಬಾಹುಬಲಿ ಮಹಿಮೆ, ಮುಂಜಾಬಾದ್ ಕೋಟೆಯ ಪ್ರಾಚೀನತೆ, ಹೇಮಾವತಿ ಹಾಗೂ ಯಗಚಿ ಜಲಾಶಯದ ನೈರ್ಮಲ್ಯ, ಮೂಕನಮನೆ ಜಲಪಾತದ ನೈಸರ್ಗಿಕ ಸೌಂದರ್ಯ ಎಲ್ಲವೂ ಈ ಪ್ರವಾಸದಲ್ಲಿ ಸೇರಿವೆ. ಒಬ್ಬ ಪ್ರಯಾಣಿಕನಿಗೆ ೪,೩೦೦ ರು. ದರ ನಿಗದಿಪಡಿಸಲಾಗಿದೆ. ಸಂಚಾರಕರು ಕೆಲವೇ ನಿಮಿಷಗಳಲ್ಲಿ ಆಕಾಶದಿಂದ ಈ ಎಲ್ಲಾ ತಾಣಗಳ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದಾದ ಅನುಭವ ಜಿಲ್ಲೆಯಲ್ಲಿ ಒದಗಿಸಲಾಗುತ್ತಿದೆ.