ಬಜೆಟ್‌ನಲ್ಲಿ ಜಿಲ್ಲೆಯ ನಿರ್ಲಕ್ಷ್ಯ, ಸಿಎಂ ಗಮನ ಸೆಳೆಯಲು ಶಾಸಕರು ವಿಫಲ?

| Published : Mar 07 2025, 11:45 PM IST

ಸಾರಾಂಶ

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಉತ್ತರ ಕನ್ನಡವನ್ನು ನಿರ್ಲಕ್ಷಿಸಲಾಗಿದೆ.

ಕಾರವಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಉತ್ತರ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಉತ್ತರ ಕನ್ನಡದ ಉಸ್ತುವಾರಿ ಸಚಿವರು, ಆಡಳಿತ ಪಕ್ಷದ ಶಾಸಕರು ಬಜೆಟ್ ನಲ್ಲಿ ಜಿಲ್ಲೆಗೆ ಅಗತ್ಯವಾದ ಸೌಲಭ್ಯದ ಬಗ್ಗೆ ಮುಖ್ಯಮಂತ್ರಿ ಅವರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆರ್.ವಿ. ದೇಶಪಾಂಡೆ ಅವರ ಹಳಿಯಾಳ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲೂಕು ಎಂದು ಘೋಷಣೆ ಮಾಡಿದ್ದನ್ನು ಹೊರತುಪಡಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಯೋಜನೆ ಇಲ್ಲ.

ಜಿಲ್ಲೆಯ ಜನತೆಯ ಬಹುಕಾಲದ ಜನತೆಯ ಕನಸಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೂ ಈ ಬಜೆಟ್ ನಲ್ಲಿ ಎಳ್ಳುನೀರು ಬಿಡಲಾಗಿದೆ. ಹಾಗಂತ ಕೊಪ್ಪಳ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಲಾಗಿದೆ. ಕೊನೇ ಪಕ್ಷ ಕಾರವಾರದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವುದನ್ನಾದರೂ ಬಜೆಟ್ ನಲ್ಲಿ ಪ್ರಸ್ತಾಪಿಸಬಹುದಿತ್ತು. ಅದೂ ಸಾಧ್ಯವಾಗಿಲ್ಲ.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ, ಯುವ ಜನತೆಗೆ ಉದ್ಯೋಗಾವಕಾಶ ನೀಡುವ ಉದ್ಯಮಗಳ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡುವುದು, ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಹೀಗೆ ಹತ್ತಾರು ಬೇಡಿಕೆಗಳು, ನೂರಾರು ನಿರೀಕ್ಷೆಗಳು ಈ ಬಜೆಟ್ ಮೇಲಿತ್ತು. ಆದರೆ ಅದೆಲ್ಲ ಈಗ ನುಚ್ಚುನೂರಾಗಿದೆ.

ವಿಮಾನ ನಿಲ್ದಾಣ ಕಾಮಗಾರಿ ಆರಂಭ, ಹೊನ್ನಾವರದಲ್ಲಿ ಸ್ವಯಂ ಚಾಲಿತ ಪರೀಕ್ಷಾ ಪಥ, ಹಳಿಯಾಳದಲ್ಲಿ ಕೆರೆಗೆ ನೀರು ತುಂಬುವುದು ಇಂತಹ ಹಳೆ ಯೋಜನೆಗಳು, ಮೊದಲೇ ಘೋಷಣೆಯಾಗಿದ್ದನ್ನೂ ಬಜೆಟ್ ನಲ್ಲಿ ಸೇರಿಸುವ ಮೂಲಕ ಏನನ್ನು ಮಾಡಲು ಹೊರಟಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜಿಲ್ಲೆಯ ಆರು ಶಾಸಕರಲ್ಲಿ ನಾಲ್ವರು ಕಾಂಗ್ರೆಸ್ ನಿಂದ ಆಯ್ಕೆಯಾದವರು. ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಸಹ ಅನಧಿಕೃತವಾಗಿ ಕಾಂಗ್ರೆಸ್ ಶಾಸಕರಾಗಿದ್ದಾರೆ. ಹೀಗಿದ್ದರೂ ಇವರೆಲ್ಲ ಜಿಲ್ಲೆಯ ಸಮಸ್ಯೆ, ಬೇಕು ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೆ ತರುವಲ್ಲಿ ವಿಫಲರಾದರಾ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲೆಗೆ ಯಾವುದೆ ಕೊಡುಗೆ ಇಲ್ಲದಿದ್ದರೂ ಬಜೆಟ್ ಅನ್ನು ಸ್ವಾಗತಿಸಿ, ಅಭೂತಪೂರ್ವ ಬಜೆಟ್ ಎಂದು ಹೇಳಿಕೊಳ್ಳುತ್ತಿರುವುದು ಸಹ ವಿಪರ್ಯಾಸದ ಸಂಗತಿಯಾಗಿದೆ.

ಒಟ್ಟಿನಲ್ಲಿ ಈ ಬಜೆಟ್ ಉತ್ತರ ಕನ್ನಡ ಜಿಲ್ಲೆಯ ಜನತೆಯ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಜಿಲ್ಲೆಗೆ ಮಹತ್ವದ ಯಾವ ಕೊಡುಗೆಯೂ ದೊರೆತಿಲ್ಲ.