ಕೆರೆಗಳ ಸಮಗ್ರ ವರದಿ ಸಲ್ಲಿಸಲು ಜಿಪಂ ಸಿಇಒ ಕೀರ್ತನಾ ಸೂಚನೆ

| Published : Feb 09 2025, 01:16 AM IST

ಕೆರೆಗಳ ಸಮಗ್ರ ವರದಿ ಸಲ್ಲಿಸಲು ಜಿಪಂ ಸಿಇಒ ಕೀರ್ತನಾ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಸರ್ಕಾರಿ ಜಾಗದಲ್ಲಿರುವ ಎಲ್ಲಾ ಕೆರೆಗಳ ಸರ್ವೆ ನಂಬರ್‌ ಸಹಿತ ಸಮಗ್ರ ವರದಿಯನ್ನು ಕೂಡಲೇ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆಗಳ ಸರ್ವೆ, ಒತ್ತುವರಿ, ತೆರವು ಕುರಿತಂತೆ ಅಧಿಕಾರಿಗಳ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಸರ್ಕಾರಿ ಜಾಗದಲ್ಲಿರುವ ಎಲ್ಲಾ ಕೆರೆಗಳ ಸರ್ವೆ ನಂಬರ್‌ ಸಹಿತ ಸಮಗ್ರ ವರದಿಯನ್ನು ಕೂಡಲೇ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಸರ್ವೆ, ಒತ್ತುವರಿ, ತೆರವು ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ಒಟ್ಟು ಕೆರೆಗಳನ್ನು ಸರ್ವೆ ಮಾಡಿಸಿ ಒತ್ತುವರಿಯಾಗಿರುವ ಕೆರೆಗಳನ್ನು ಕೂಡಲೇ ತೆರವುಗೊಳಿಸಿ ಅವುಗಳನ್ನು ಸಂರಕ್ಷಣೆ ಮಾಡಲು ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮಕೈಗೊಳ್ಳುವ ಜೊತೆಗೆ ಅವುಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ಸಲ್ಲಿಸಬೇಕು. ಕೆರೆಗಳ ಸ್ಥಿತಿಗತಿಗಳು ಸೇರಿದಂತೆ ಅಲ್ಲಿನ ನೀರಿನ ಗುಣಮಟ್ಟ ಪರಿಶೀಲಿಸಿ 2-3 ದಿನಗಳಲ್ಲಿ ವರದಿ ನೀಡಬೇಕು ಎಂದು ಹೇಳಿದರು.

ಕೆರೆಗಳ ಅಪೆಕ್ಸ್ ಸಮಿತಿಯಲ್ಲಿರುವ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಈ ಬಗ್ಗೆ ಸಭೆಗಳನ್ನು ಮಾಡಿ ಅಲ್ಲಿನ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು. ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ತಮ್ಮ ವ್ಯಾಪ್ತಿಗೆ ಬರುವ ಸುಮಾರು 1729 ಕೆರೆಗಳ ದಾಖಲಾತಿಗಳು ಸೇರಿದಂತೆ ಕೆರೆಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಜಾಗ ರಕ್ಷಿಸಲು ಮುಂದಾಗಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮಾತನಾಡಿ, ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳ ವ್ಯಾಪ್ತಿಯ ಕೆರೆಗಳ ಅಂಕಿಅಂಶಗಳು ವ್ಯತ್ಯಾಸವಾಗದಂತೆ ಪಂಚಾಯತ್‌ ರಾಜ್‌ ಇಲಾಖೆ, ಕಂದಾಯ, ಸಣ್ಣ ನೀರಾವರಿ, ಮತ್ತಿತರ ಇಲಾಖೆಗಳು ಸೇರಿ ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗುವ ಕೆರೆಗಳ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರಿಯಾದ ಅಂಕಿಅಂಶಗಳನ್ನು ನೀಡಬೇಕು ತಾಲೂಕು ಕಾರ್ಯನಿರ್ವಾಹಣಾಧಿಕಾರಿ, ತಹಸೀಲ್ದಾರರು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ. ಹನುಮಂತಪ್ಪ, ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್, ರಶ್ಮಿ, ತಾಲೂಕುಗಳ ತಹಸೀಲ್ದಾರರು, ಜಿಪಂ ಉಪ ಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.8 ಕೆಸಿಕೆಎಂ 2