ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜು.೩೧ರಂದು ನಗರದಲ್ಲಿ ’ಜಿಲ್ಲಾ ಜನಪದ ಸಂಭ್ರಮ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಅಚ್ಚುಕಟ್ಟು ಆಯೋಜನೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ’ಜಿಲ್ಲಾ ಜನಪದ ಸಂಭ್ರಮ’ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಾಮರಾಜನಗರ ಜನಪದ ಕಲೆಗಳ ತವರೂರು ಎಂದೇ ಪ್ರಸಿದ್ಧಿ ಪಡೆದಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿ ಬಿಂಬಿಸುವಂತಹ ವಿಶಿಷ್ಟ, ವಿಭಿನ್ನ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಜಾನಪದ ಕಲಾವಿದರಿದ್ದು, ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಕಾರ್ಯಕ್ರಮದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಕಲಾಸಂಸ್ಕೃತಿ ಇತರೆ ಜಿಲ್ಲೆಗಳಿಗೆ ಪಸರಿಸುವಂತಾಗಬೇಕು. ಈ ಸಂಬಂಧ ಅವಶ್ಯ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ತಿಳಿಸಿದರು.ಕಾರ್ಯಕ್ರಮವು ಕರ್ನಾಟಕ ಜಾನಪದ ಅಕಾಡಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿದೆ. ಜು.೩೧ರಂದು ಬೆಳಗ್ಗೆ ೯ ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ಏರ್ಪಡಿಸಲಾಗಿದೆ. ಬಳಿಕ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಲಾ ಪ್ರಕಾರಗಳನ್ನೊಳಗೊಂಡ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.ವೇದಿಕೆ ಕಾರ್ಯಕ್ರಮದಲ್ಲಿ ಎಲ್ಲ ಬಗೆಯ ಕಲಾ ಪ್ರದರ್ಶನಗಳು ಅನಾವರಣಗೊಳ್ಳಲು ವ್ಯವಸ್ಥೆ ಮಾಡಬೇಕು. ಜನಪದ ಸಂಭ್ರಮ ಸಂಬಂಧ ಉಪನ್ಯಾಸ ಕಾರ್ಯಕ್ರಮ ಆಯೋಜಿಸಬೇಕು. ಆಧುನಿಕತೆಯ ಆಡಂಬರಕ್ಕೆ ಸಿಲುಕಿ ನಶಿಸಿ ಹೋಗುತ್ತಿರುವ ಜನಪದ ಕಲೆಗಳಿಗೆ ಜೀವ ತುಂಬುವ ಮಾಹಿತಿ ಉಪನ್ಯಾಸ ವಿಷಯದಲ್ಲಿರುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಪದವಿ ಹಾಗೂ ಪದವಿ ಪೂರ್ವ, ಎಂಜಿನಿಯರಿಂಗ್, ಇತರೆ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ನಿರ್ದೇಶನ ನೀಡಿದರು. ಕಾರ್ಯಕ್ರಮಕ್ಕೆ ಮೈಸೂರು ಆಕಾಶವಾಣಿಯ ಸಹಯೋಗವು ಸಹ ಅವಶ್ಯವಾಗಿದೆ. ಕಾರ್ಯಕ್ರಮ ಸೋಶಿಯಲ್ ಮೀಡಿಯಾದಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿ. ಎಲ್ಲ ಜನರಿಗೆ ತಲುಪುವಂತಾಗಬೇಕು. ಆದಿವಾಸಿ ಬುಡಕಟ್ಟು ಪ್ರದೇಶಗಳ ಶಾಲೆಗಳಲ್ಲಿ ಸ್ಮಾರ್ಟ್ ಟಿವಿ ವ್ಯವಸ್ಥೆ ಲಭ್ಯವಿರುವುದರಿಂದ ಅಲ್ಲಿಯೂ ಕಾರ್ಯಕ್ರಮದ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಿ ಹಾಡಿಯ ಮಕ್ಕಳು ಕಾರ್ಯಕ್ರಮ ವೀಕ್ಷಿಸುವಂತಾಗಬೇಕು. ಕಾರ್ಯಕ್ರಮದ ವೀಕ್ಷಕರ ಸಂಖ್ಯೆಯನ್ನು ದಾಖಲೀಕರಣ ಮಾಡಬೇಕು. ಇದಕ್ಕಾಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿ ರಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡುವಂತೆ ಸೂಚನೆ ನೀಡಿದರು. ಆಹ್ವಾನ ಪತ್ರಿಕೆಗಳನ್ನು ಶಿಷ್ಟಾಚಾರದ ಜೊತೆಗೆ ವಿಶೇಷವಾಗಿ ಮುದ್ರಿಸಿ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ವೇದಿಕೆಯಲ್ಲಿ ಕಲೆ, ಸಂಸ್ಕೃತಿ ಹೊರಸೂಸುವ, ಪ್ರಕೃತಿ ಆರಾಧಿಸುವಂತಹ ಆಕರ್ಷಣೀಯ ಬ್ಯಾಕ್‌ಡ್ರಾಪ್ ಸಿದ್ದಪಡಿಸಬೇಕು. ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನೊಳಗೊಂಡ ವಿವರವನ್ನು ಜಿಲ್ಲಾಡಳಿತ ಭವನದ ಗೇಟ್‌ನಲ್ಲಿ ಅಳವಡಿಸಬೇಕು. ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಕಾರ್ಯಕ್ರಮದ ವಿಶೇಷತೆ ಬಗ್ಗೆ ಮಾತನಾಡಿರುವ ವೀಡಿಯೋ, ಜಿಂಗಲ್ಸ್‌ಗಳನ್ನು ಪ್ರಸಾರ ಮಾಡುವ ವ್ಯವಸ್ಥೆಯಾಗಬೇಕು. ಒಟ್ಟಾರೆ ಕಾರ್ಯಕ್ರಮದಲ್ಲಿ ಹೊಸತನವಿರುವಂತೆ ನೋಡಿಕೊಳ್ಳಬೇಕು ಎಂದರು. ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ.ಕವಿತ, ಎಡಿಸಿ ಗೀತಾ ಹುಡೇದ, ಕರ್ನಾಟಕ ಜಾನಪದ ಅಕಾಡಮಿ ರಿಜಿಸ್ಟ್ರಾರ್ ನಮ್ರತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ಜಿಲ್ಲಾ ಜಾನಪದ ಅಕಾಡಮಿ ಸದಸ್ಯರು ಹಾಗೂ ಆಕಾಶವಾಣಿ ಕಲಾವಿದ ಉಮೇಶ್, ತಹಸೀಲ್ದಾರ್ ಗಿರಿಜ, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.