ಚಿಕ್ಕಮಗಳೂರುಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಸೇರಿದಂತೆ ವಿವಿಧ ಮೂಲಗಳಿಂದ ದೊರೆತ ಅನುದಾನದಿಂದ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳ ಬಗ್ಗೆ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕಾಮಗಾರಿ ಕೈ ಗೊಳ್ಳಲು ಜಿಲ್ಲಾ ಯೋಜನಾ ಸಮಿತಿ ಸಭೆ ಸಹಕಾರಿ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
- ಜಿಲ್ಲಾ ಯೋಜನಾ ಸಮಿತಿ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಸೇರಿದಂತೆ ವಿವಿಧ ಮೂಲಗಳಿಂದ ದೊರೆತ ಅನುದಾನದಿಂದ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳ ಬಗ್ಗೆ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕಾಮಗಾರಿ ಕೈ ಗೊಳ್ಳಲು ಜಿಲ್ಲಾ ಯೋಜನಾ ಸಮಿತಿ ಸಭೆ ಸಹಕಾರಿ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ಥಳೀಯವಾಗಿ ಯಾವುದೇ ಕಾಮಗಾರಿ ಕೈಗೊಳ್ಳುವಾಗ ಸೂಕ್ತ ಯೋಜನೆ ರೂಪಿಸಿ, ಒಂದೇ ಇಲಾಖೆ ಅನುದಾನದಿಂದ ಸಮರ್ಪಕವಾಗಿ ನಡೆಸಲು ಸಾಧ್ಯವಿಲ್ಲ ಎಂದಾಗ ಬೇರೆ ಇಲಾಖೆ ನೆರವಿನಲ್ಲಿ ಕಾಮಗಾರಿ ನಡೆಸಿ ಎಂದು ಸೂಚಿಸಿದರು.ಬಜೆಟ್‌ನಲ್ಲಿ ಇಲಾಖೆವಾರು ಬರುವ ಅನುದಾನವನ್ನು ಸ್ಥಳೀಯ ಸಂಸ್ಥೆ, ವಾರ್ಡ್ ಹಾಗೂ ಗ್ರಾಪಂ. ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ಆದ್ಯತೆ ಮೇರೆಗೆ ನಿರ್ಣಯಿಸಿ ನಂತರ ಅದನ್ನು ತಾಪಂಗೆ ಕಳುಹಿಸಬೇಕು. ಈ ಪ್ರಕ್ರಿಯೆ ಮುಂದಿನ ಬಜೆಟ್‌ನಿಂದ ಕಾರ್ಯರೂಪಕ್ಕೆ ಬರಲಿದೆ ಎಂದರು.
ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಶಾಸಕರು, ಗ್ರಾಪಂ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಸಮಿತಿಯಲ್ಲಿರುತ್ತಾರೆ. 105ಜನ ಸದಸ್ಯರು ಇರಬೇಕಿತ್ತು. ಆದರೆ ಸದ್ಯ 19 ಜನರಿದ್ದಾರೆ. ಜಿಪಂ, ತಾಪಂ, ಬಹುತೇಕ ಗ್ರಾಪಂ ಆಡಳಿತ ಮಂಡಳಿ ಇಲ್ಲದ ಕಾರಣ ಇಷ್ಟು ಮಾತ್ರ ಸದಸ್ಯರಾಗಿದ್ದಾರೆ ಎಂದು ಹೇಳಿದರು.ಜಿಲ್ಲೆಯ 226 ಗ್ರಾಪಂಗಳಲ್ಲಿ 29ಕ್ಕೆ ಮಾತ್ರ ಆಡಳಿತ ಮಂಡಳಿ ಇದೆ. ಉಳಿದ ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಕವಾಗಿದೆ. ಸ್ಥಳೀಯ ಸಂಸ್ಥೆ ವಾರ್ಡ್ ಮತ್ತು ಗ್ರಾಪಂ ಸಭೆಗಳನ್ನು ಮಾಡಿ ಎಲ್ಲ ಇಲಾಖೆಗಳಿಂದ ಎಷ್ಟು ಅನುದಾನ ಬರುತ್ತಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಅನುದಾನ ಕೃಢೀಕರಿಸಿ, ಆದ್ಯತೆಯ ಕಾಮಗಾರಿಗೆ ಪ್ರಾಶಸ್ತ್ಯ ನೀಡುವುದು ಜಿಲ್ಲಾ ಯೋಜನಾ ಸಮಿತಿ ಉದ್ದೇಶ ಎಂದು ವಿವರಿಸಿದರು.
ಜೇನು ಸಾಕಾಣಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ತೋಟಗಾರಿಕೆ ಇಲಾಖೆಯಿಂದ ಝೇಂಕಾರ ಎಂಬ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಗೆ ಕೃಷಿ ಇಲಾಖೆಗೆ ಸಹಕಾರ ಪಡೆದು ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸ ಲಾಗುವುದು ಎಂದರು.ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಶಿಕ್ಷಣ, ನೀರು ಪೂರೈಕೆ, ವಸತಿ, ಉದ್ಯೋಗ ದಂತಹ ವಿಷಯಗಳನ್ನುಗ್ರಾಮ ಸಭೆಗಳಲ್ಲಿ ಮಂಡಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಮಾತನಾಡಿ, ಜಿಲ್ಲೆಯಲ್ಲಿನ 1858 ಅಂಗನವಾಡಿಗಳಲ್ಲಿ 1034 ಅಂಗನವಾಡಿ ಕಟ್ಟಡ ಕಾಮಗಾರಿ ಕೈಗೊಳ್ಳಲಾಗಿದೆ. 42 ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಗುರುತಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಶಾಸಕ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್ ಇದ್ದರು.