ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಅಪರಾಧ ತಡೆ ಮತ್ತು ಪತ್ತೆ ಕಾರ್ಯಗಳಲ್ಲಿ ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲಾ ಪೊಲೀಸ್ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಸ್ಕಾರ್ಪಿಯೋ ಕಾರ್‌ ಸೇವೆಗೆ ಸಮರ್ಪಿಸಿ ಶಾಂತನಗೌಡ ಶ್ಲಾಘನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಅಪರಾಧ ತಡೆ ಮತ್ತು ಪತ್ತೆ ಕಾರ್ಯಗಳಲ್ಲಿ ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲಾ ಪೊಲೀಸ್ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಪೊಲೀಸ್ ಇಲಾಖೆಗೆ ಶಾಸಕರ ಅನುದಾನದಲ್ಲಿ ₹15 ಲಕ್ಷ ಮೌಲ್ಯದ ಸ್ಕಾರ್ಪಿಯೋ ನೂತನ ಕಾರನ್ನು ಖರೀದಿಸಲಾಗಿದ್ದು, ಶುಕ್ರವಾರ ವಾಹನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2024ರಲ್ಲಿ ನಡೆದ ನ್ಯಾಮತಿ ಎಸ್.ಬಿ.ಐ. ಬ್ಯಾಂಕ್ ದರೋಡೆ ಪ್ರಕರಣವನ್ನು ಜಿಲ್ಲಾ ಎಸ್‌ಪಿಯವರು ಅವಿಶ್ರಾಂತವಾಗಿ ಶ್ರಮಿಸಿ, ಪತ್ತೆ ಮಾಡಿ ಹತ್ತಾರು ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆದಿರುವ ಘಟನೆ ಸಾರ್ವಜನಿಕರಿಂದ ಪ್ರಶಂಸೆ ಪಾತ್ರವಾಗಿದೆ. ಅಲ್ಲದೇ, ಗಣೇಶ ಹಬ್ಬ ಸಮಯೆದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಜೆ. ಧ್ವನಿರ್ವಧಕಗಳ ಬಳಕೆ ಕಟ್ಟುನಿಟ್ಟಾಗಿ ನಿರ್ಬಂಧಿಸಿ, ಗಲಾಟೆಗಳಿಗೆ ಕಡಿವಾಣ ಹಾಕಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವುರ, ಮುಂದಿನ ವರ್ಷ ನ್ಯಾಮತಿ ಮತ್ತು ಹೊನ್ನಾಳಿ ಪೊಲೀಸ್ ಠಾಣೆಗಳಿಗೆ ತಲಾ 2 ಬೈಕ್ ಖರೀದಿಸಲು ಅನುದಾನ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಜಿಲ್ಲೆಯ ಜಗಳೂರು ನಂತರ ಹೊನ್ನಾಳಿಯಲ್ಲಿ ಶಾಸಕರ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ಹೊಸ ವಾಹನಗಳನ್ನು ಖರೀಸಿದಂತಾಗಿದೆ. ಜಿಲ್ಲೆಗೆ ನಾನು ಬಂದು 2 ವರ್ಷ 4 ತಿಂಗಳಾಗಿವೆ. ಹೊನ್ನಾಳಿ ಶಾಸಕರು ಅಧಿಕಾರಿಗಳಿಗೆ ಉತ್ತಮ ಕೆಲಸ ಮಾಡಲು ಉತ್ತೇಜನ ನೀಡುವ ಮನೋಭಾವದವರು. ನ್ಯಾಮತಿ ಎಸ್‌ಬಿಐನಲ್ಲಿ ದರೋಡೆ ಪ್ರಕರಣ ವಿಷಯದಲ್ಲಿ ಕೂಡ ಶಾಸಕರು ಯಾವುದೇ ರೀತಿಯಲ್ಲಿ ಪೊಲೀಸರಿಗೆ ರಾಜಕೀಯ ಒತ್ತಡ ಹಾಕದೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಸಹಕಾರ ನೀಡಿದ್ದರು ಎಂದರು.

ಸಬ್ಇನ್‌ಸ್ಪೆಕ್ಟರ್‌ ಕುಮಾರ್, ಮಹಿ‍ಳಾ ಸಬ್ ಇನ್‌ಸ್ಪೆಕ್ಟರ್ ನಿರ್ಮಲಾ ರೆಡ್ಡಿ, ಹರೀಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಹೊನ್ನಾಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಚ್. ಸುನೀಲ್ ಕುಮಾರ್ ಅವರು ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.

ಜಿಲ್ಲಾ ಎಸ್‌ಪಿ ಠಾಣೆಗೆ ಆಗಮಿಸುತ್ತಿದ್ದಂತೆ ಹೊನ್ನಾಳಿ ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಯಿತು. ಮುಖಂಡ ಸುರೇಂದ್ರ ಗೌಡ, ರಮೇಶ್, ಸುರೇಶ್, ಪೊಲೀಸ್ ಸಿಬ್ಬಂದಿ ಇದ್ದರು.

- - -

-2ಎಚ್.ಎಲ್.ಐ2:

ಸ್ಕಾರ್ಪಿಯೋ ಕಾರನ್ನು ಶಾಸಕ ಡಿ.ಜಿ.ಶಾಂತನಗೌಡ ಸೇವೆಗೆ ಸಮರ್ಪಿಸಿದರು. ಎಸ್‌ಪಿ ಉಮಾ ಪ್ರಶಾಂತ್, ಸಿಪಿಐ. ಸುನೀಲ್ ಕುಮಾರ್ ಇತರರು ಇದ್ದರು.