ಈ ಪರಿಸ್ಥಿತಿಯಲ್ಲಿ ದು:ಖದಲ್ಲಿರುವ ಮೃತರ ಕುಟುಂಬದವರಿಗೆ ಆಯೋಜನೆಯ ಸಂಸ್ಥೆಗಳು ಸಾಂತ್ವನ ಹೇಳಬೇಕು ಹಾಗೂ ಅವರ ಕುಟುಂಬದ ನೆರವಿಗೆ ಬರಬೇಕು. ಆರ್‌ಸಿಬಿ ಹಾಗೂ ಕೆಎಸ್‌ಸಿಎನಿಂದ ತಲಾ ಒಂದು ಕೋಟಿ ರು. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು.

ಕನ್ನಡಪ್ರಭ ವಾರ್ತೆ ತುಮಕೂರು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆರ್ಸಿಬಿ ತರಾತುರಿಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲ್ತುಳಿತದಿಂದ ಸಾವನ್ನಪ್ಪಿದ 11 ಮಂದಿ ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ರು. ಪರಿಹಾರ ನೀಡಬೇಕು ಎಂದು ಜಿಲ್ಲಾ ಕನ್ನಡಪರ ಸಂಘಟನೆಗಳು ಹಾಗೂ ಜಿಲ್ಲಾ ಕ್ರೀಡಾ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿವೆ.

ಸಂಘಟನೆಗಳ ಮುಖಂಡರು ಈ ಸಂಬಂಧ ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಮೃತರ ಕುಟುಂಬದ ಒಬ್ಬರಿಗೆ ಕೆಎಸ್‌ಸಿಎನಲ್ಲಿ ಉದ್ಯೋಗ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಣೆಗೆ ಸರಿಯಾದ ಸಿದ್ಧತೆ ಮಾಡಿಕೊಂಡಿರಲಿಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಸೇರುತ್ತಾರೆ ಎಂಬ ನಿರೀಕ್ಷೆಯಲ್ಲಿ ಸೂಕ್ತ ಭದ್ರತೆ ವಹಿಸಬೇಕಾಗಿತ್ತು. ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕ ಅಭಿಮಾನಿಗಳು ಪ್ರಾಣ ಕಳೆದುಕೊಳ್ಳುವಂತಾಗಿದ್ದು ದುರದೃಷ್ಟಕರ ಎಂದು ಹೇಳಿದರು.

ಈ ಪರಿಸ್ಥಿತಿಯಲ್ಲಿ ದು:ಖದಲ್ಲಿರುವ ಮೃತರ ಕುಟುಂಬದವರಿಗೆ ಆಯೋಜನೆಯ ಸಂಸ್ಥೆಗಳು ಸಾಂತ್ವನ ಹೇಳಬೇಕು ಹಾಗೂ ಅವರ ಕುಟುಂಬದ ನೆರವಿಗೆ ಬರಬೇಕು. ಆರ್‌ಸಿಬಿ ಹಾಗೂ ಕೆಎಸ್‌ಸಿಎನಿಂದ ತಲಾ ಒಂದು ಕೋಟಿ ರು. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವಾಗ ಸರ್ಕಾರವು ಎಚ್ಚರಿಕೆ ಕ್ರಮ ವಹಿಸಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು, ಮುಖಂಡರಾದ ಜಯಣ್ಣ, ನಟರಾಜಶೆಟ್ಟರು, ಹೊಸಕೋಟೆ ನಟರಾಜ್, ಜೆ.ವಿಠಲ್ ಗುರುರಾಘವೇಂದ್ರ, ಜೆ.ವಿಠಲ್, ಸತೀಶ್, ನಟರಾಜ್, ವರದರಾಜು ಹಾಜರಿದ್ದರು.