ತೀವ್ರ ಬರಗಾಲದ ಮುನ್ಸೂಚನೆಯ ನಡುವೆಯೇ ಕೊನೆಗೂ ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಕ್ಕೆ ಭಾಗಶಃ ಜೀವ ಕಳೆ ಬಂದಿದೆ.
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗತೀವ್ರ ಬರಗಾಲದ ಮುನ್ಸೂಚನೆಯ ನಡುವೆಯೇ ಕೊನೆಗೂ ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಕ್ಕೆ ಭಾಗಶಃ ಜೀವ ಕಳೆ ಬಂದಿದೆ. ನಾಡಿಗೆ ವಿದ್ಯುತ್ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಲಿಂಗನಮಕ್ಕಿಯ ಈಗಿನ ಸ್ಥಿತಿ ತೃಪ್ತಿಕರವಲ್ಲವಾದರೂ ಪರವಾಗಿಲ್ಲ ಎನ್ನುವಂತಾಗಿದ್ದರೆ, ನಿರಾಶೆಗೆ ಬಿದ್ದಿದ್ದ ಭದ್ರಾ ಅಚ್ಚುಕಟ್ಟು ರೈತರಲ್ಲಿ ಕೊನೆಗೂ ಸ್ವಲ್ಪ ಮಂದಹಾಸ ಮೂಡುವಂತಾಗಿದೆ.
ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ 47 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಆದರೂ ಜಲಾಶಯ ಇನ್ನೂ ಭರ್ತಿಯಾಗಲು ಹೆಚ್ಚಿನ ನೀರು ಬೇಕಿದೆ. ಸದ್ಯ ಶೇ.51.32ರಷ್ಟು ನೀರು ಸಂಗ್ರಹವಾಗಿದೆ.ರಾಜ್ಯದಲ್ಲಿಯೇ ಅತಿ ದೊಡ್ಡ ಜಲಾಶಯಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತಿರುವ ಲಿಂಗನಮಕ್ಕಿ ಜಲಾಶಯದಲ್ಲಿ 151.75 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಈಗ ಜಲಾಶಯದಲ್ಲಿ 77.81 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 128.86 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದ್ದರಿಂದ ನದಿಗೆ ನೀರು ಹರಿಸಲಾಗಿತ್ತು.
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಪ್ರಮಾಣ 1819.12 ಅಡಿಯಾಗಿದ್ದು, ಸದ್ಯ 1792.15 ಅಡಿ ನೀರು ತುಂಬಿದೆ. ಕಳೆದ ವರ್ಷ ಇದೇ ದಿನ 1811.90 ಅಡಿಯಷ್ಟು ನೀರು ತುಂಬಿತ್ತು. ಸದ್ಯ ಜಲಾಶಯಕ್ಕೆ 16259 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 556 ಕ್ಯುಸೆಕ್ ನೀರನ್ನು ಮಾತ್ರ ಹೊರ ಬಿಡಲಾಗುತ್ತಿದೆ.ಮುಂಗಾರು ಆರಂಭದಲ್ಲೇ ಜಿಲ್ಲೆಯಲ್ಲಿ ಮಳೆ ಪ್ರಮಾಣ ಅತ್ಯಂತ ಕಡಿಮೆ ಇದ್ದ ಕಾರಣ ಮಳೆಗಾಲದಲ್ಲೂ ಲಿಂಗನಮಕ್ಕಿ ಜಲಾಶಯದ ಮಟ್ಟದಲ್ಲಿ ತೀವ್ರ ಕುಸಿತ ಕಂಡಿತ್ತು. ಜುಲೈ 5ರಂದು ಜಲಾಶಯದಲ್ಲಿ 18.07 ಟಿಎಂಸಿ ನೀರು ಸಂಗ್ರಹವಿತ್ತು. ಅಂದರೆ ಶೇ.11ರಷ್ಟು ಮಾತ್ರ ಭರ್ತಿಯಾಗಿತ್ತು. ಈಗ ಶೇ 51.32ಕ್ಕೆ ನೀರಿನ ಪ್ರಮಾಣ ಏರಿಕೆಯಾಗಿದೆ.
ಭದ್ರೆ ಭರ್ತಿಗೆ 15 ಅಡಿ ಮಾತ್ರ ಬಾಕಿ: ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯ ಬರಗಾಲದಲ್ಲೂ ಭರ್ತಿಯತ್ತ ಸಾಗಿದ್ದು, ಭರ್ತಿಯಾಗಲು ಇನ್ನು 15 ಅಡಿ ಮಾತ್ರ ಬಾಕಿ ಇದೆ. ಕಳೆದೊಂದು ವಾರದಿಂದ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಮಟ್ಟ 171 ಅಡಿಗೆ ಏರಿಕೆ ಕಂಡಿದೆ.ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯ ಭರ್ತಿಯಾಗಲು ಕೇವಲ 15 ಅಡಿಯಷ್ಟೇ ಬಾಕಿ ಇದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಶೇ.75ರಷ್ಟು ಭರ್ತಿಯಾಗಿದೆ. ಇದರ ಸಂಗ್ರಹ ಸಾಮರ್ಥ್ಯ 71.53 ಟಿಎಂಸಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಕಳೆದ ಬಾರಿ ಆಗಸ್ಟ್‌ನಲ್ಲೇ ಜಲಾಶಯ ತುಂಬಿತ್ತು.