ಸಾರಾಂಶ
ಬಸಾಪುರದಿಂದ ಹಲಗೂರು ಮಾರ್ಗ ಬರುವ ರಸ್ತೆಗೆ ಸೂಚನಾ ಫಲಕ ಮತ್ತು ಆ ವೃತ್ತದಲ್ಲಿ ಐ ಮಾಸ್ಕ್ ಲ್ಯಾಟ್ ಹಾಕಬೇಕಾಗಿದೆ. ಇದನ್ನು ಹಾಕುವುದರಿಂದ ಸ್ವಲ್ಪ ಮಟ್ಟಿಗೆ ಅಪಘಾತಗಳು ನಡೆಯುವುದು ತಪ್ಪಂತಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ ಹಾಕುವುದು ಅವಕಾಶ ಇಲ್ಲದೆ ಇರುವುದರಿಂದ ವಾಹನಗಳು ನಿಯಂತ್ರಣದಲ್ಲಿ ಚಲಿಸಲು ವೇಗ ನಿಯಂತ್ರಣ ಅಂಶಗಳನ್ನು ಅಳವಡಿಸುವಂತೆ ಪೊಲೀಸ್ ರಲ್ಲಿ ರವೀಶ್ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹಲಗೂರು
ಮಳವಳ್ಳಿ - ಹಲಗೂರು - ಕನಕಪುರ ರಸ್ತೆಯಲ್ಲಿ ಸರಣಿ ಅಪಘಾತದಿಂದ ನಾಲ್ಕೈದು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಜಿಲ್ಲಾ ಗಡಿ ಭಾಗ ದಳವಾಯಿ ಕೋಡಿಹಳ್ಳಿಯಿಂದ ಹಲಗೂರು ವ್ಯಾಪ್ತಿಯ 209 ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸಿದ್ದು ಅಪಾರ ಸಾವು ನೋವುಗಳು ಉಂಟಾಗಿವೆ. ಕಳೆದ 15 ದಿನಗಳಲ್ಲಿ ನಾಲ್ಕೈದು ಮಂದಿ ಮೃತಪಟ್ಟಿದ್ದು, ಈ ಸಂಬಂಧ ಮಂಡ್ಯ ಜಿಲ್ಲಾ ಎಎಸ್ಪಿ ಸಿ.ಇ.ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್ ಮತ್ತು ಹಲಗೂರು ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು ಹಾಗೂ ಗಡಿ ಗ್ರಾಮ ದಳವಾಯಿ ಕೋಡಿಹಳ್ಳಿ ಸ್ಥಳೀಯರಿಂದ ಅಪಘಾತವಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಗ್ರಾಮದ ರವೀಶ್ ಮತ್ತು ಎನ್. ಕೆ. ಕುಮಾರ್ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ರಸ್ತೆ ತಿರುವಿನಲ್ಲಿ ಮರದ ರಂಭೆಗಳನ್ನು ತೆಗೆದು ಹಾಕುವಂತೆ ಹಾಗೂ ಸರ್ವೀಸ್ ರಸ್ತೆ ಸ್ಪೀಡ್ ಬ್ರೇಕರ್ ಅಳವಡಿಸುಲು ಬ್ಯಾರಿಕೇಡ್ ಗಳನ್ನು ಹಾಕಬೇಕು. ಹಾಗೂ ಬಸಾಪುರದಿಂದ ಹಲಗೂರು ಮಾರ್ಗ ಬರುವ ರಸ್ತೆಗೆ ಸೂಚನಾ ಫಲಕ ಮತ್ತು ಆ ವೃತ್ತದಲ್ಲಿ ಐ ಮಾಸ್ಕ್ ಲ್ಯಾಟ್ ಹಾಕಬೇಕಾಗಿದೆ. ಇದನ್ನು ಹಾಕುವುದರಿಂದ ಸ್ವಲ್ಪ ಮಟ್ಟಿಗೆ ಅಪಘಾತಗಳು ನಡೆಯುವುದು ತಪ್ಪಂತಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ ಹಾಕುವುದು ಅವಕಾಶ ಇಲ್ಲದೆ ಇರುವುದರಿಂದ ವಾಹನಗಳು ನಿಯಂತ್ರಣದಲ್ಲಿ ಚಲಿಸಲು ವೇಗ ನಿಯಂತ್ರಣ ಅಂಶಗಳನ್ನು ಅಳವಡಿಸುವಂತೆ ಪೊಲೀಸ್ ರಲ್ಲಿ ಮನವಿ ಮಾಡಿದರು.