ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ವರ್ಗಾವಣೆ

| Published : Jul 05 2024, 12:46 AM IST

ಸಾರಾಂಶ

ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ನಾಗೇಶ್ ಅವರು, ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೇ, ಯಾರ ಹಂಗೂ ಇಲ್ಲದೇ, ತಮಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಇದರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದೇ ಪ್ರಥಮ ಬಾರಿಗೆ ಓರ್ವ ವರ್ಗಾವಣೆಗೊಂಡ ಎಸ್ಪಿಗೆ ಹೂ ಮಳೆಗೈದು, ಜೈಕಾರ ಹಾಕಿ ಬೀಳ್ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದ 2 ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿ.ಎಲ್. ನಾಗೇಶ್ ರನ್ನು ರಾಜ್ಯ ಸರ್ಕಾರ ಬೆಂಗಳೂರಿಗೆ ವರ್ಗಾವಣೆ ಮಾಡಿದೆ. ಈ ಹಿನ್ನೆಲೆ ವರ್ಗಾವಣೆಗೊಂಡ ಚಿಕ್ಕಬಳ್ಳಾಪುರ ಎಸ್ಪಿಗೆ ಪೊಲೀಸ್ ಸಿಬ್ಬಂದಿಯು ಪುಷ್ಪ ಮಳೆಗೈದು, ಜೈಕಾರ ಹಾಕಿ ವಿಶೇಷವಾಗಿ ಬೀಳ್ಕೊಡುಗೆ ನೀಡಿದರು.

ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಾವಣೆಯಾದ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್‌ರನ್ನು ವಿಶೇಷವಾಗಿ ಬೀಳ್ಕೊಟ್ಟರು.

ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ನಾಗೇಶ್ ಅವರು, ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೇ, ಯಾರ ಹಂಗೂ ಇಲ್ಲದೇ, ತಮಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಇದರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದೇ ಪ್ರಥಮ ಬಾರಿಗೆ ಓರ್ವ ವರ್ಗಾವಣೆಗೊಂಡ ಎಸ್ಪಿಗೆ ಹೂ ಮಳೆಗೈದು, ಜೈಕಾರ ಹಾಕಿ ಬೀಳ್ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಕಾರಿನಲ್ಲಿ ಹತ್ತಿಸಿ, ಕಾರಿನ ಎರಡೂ ಬದಿಯಲ್ಲಿ ನಿಂತು ಸೆಲ್ಯೂಟ್ ಹೊಡೆಯುವುದರ ಮೂಲಕ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು. ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ರವರು ಸಹ ಎಲ್ಲಾ ಪೊಲೀಸರ, ಅಧಿಕಾರಿಗಳಿಂದ ವೈಯಕ್ತಿಕ ಸೆಲ್ಯೂಟ್ ಪಡೆದು ಹಸ್ತಲಾಘವ ನೀಡಿದ ದೃಶ್ಯ ಹೃದಯ ಸ್ಪರ್ಶಿಯಾಗಿತ್ತು.

ನೇರನುಡಿಯಿಂದ ಕರ್ತವ್ಯದಲ್ಲಿ ಜನಮನ್ನಣೆ ಪಡೆದಿದ್ದ ಎಸ್ಪಿ ಡಿ.ಎಲ್. ನಾಗೇಶ್ ಅವರನ್ನು ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯವರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಂ ಖಾಸೀಂ, ಡಿವೈಎಸ್ ಪಿಗಳಾದ ಎಸ್,ಶಿವಕುಮಾರ್,ಮುರಳೀಧರ್, ಜಿಲ್ಲೆಯ ಸಿವಿಲ್, ಸಂಚಾರಿ ಮತ್ತು ಡಿಎಆರ್ ನ ಎಲ್ಲಾ ಸರ್ಕಲ್ ಇನ್ಸ್ ಪೆಕ್ಟರ್ ಗಳು,ಸಬ್ ಇನ್ಸ್ ಪೆಕ್ಟರ್ ಗಳು, ಕಾನ್ಸ್ ಟೇಬಲ್ ಗಳು ಇದ್ದರು.