ಸಾರಾಂಶ
- ಜಿಲ್ಲೆಯ 84 ಪ್ರಕರಣಗಳ ವಿಚಾರಣೆ, ಸೆ. 24 ರಂದು ಅಹವಾಲು ಸಲ್ಲಿಸಬಹುದು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನ್ಯಾಯಮೂರ್ತಿಗಳು ಹಾಗೂ ರಾಜ್ಯದ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಹಾಗೂ ಅವರ ತಂಡ ಸೆ. 24 ರಿಂದ 26 ರವರೆಗೆ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಜಿಲ್ಲೆಯ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.24 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಉಪ ಲೋಕಾಯುಕ್ತರು ಹಾಗೂ ಅವರ ತಂಡ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕಾನೂನು ಪ್ರಕಾರ ಆಗಬೇಕಾದ ಕೆಲಸದಲ್ಲಿ ವಿಳಂಬ ಮಾಡುತ್ತಿದ್ದರೆ ಅಥವಾ ವೃಥಾ ತೊಂದರೆ ಕೊಡುತ್ತಿದ್ದಲ್ಲಿ ಇದನ್ನು ಸಾರ್ವಜನಿಕರು ನಮೂನೆ 1 ಅಥವಾ 2ರಲ್ಲಿ ಸಾಕ್ಷಾಧಾರಗಳೊಂದಿಗೆ ಅಹವಾಲು ಸಲ್ಲಿಸಬಹುದಾಗಿದೆ ಎಂದರು.ಸೆ. 25 ರಂದು ಜಿಪಂ ಸಭಾಂಗಣದಲ್ಲಿ ಉಪ ಲೋಕಾಯುಕ್ತರು ಹಾಗೂ ಅವರ ನಾಲ್ಕು ಜನ ನ್ಯಾಯಾಧೀಶರನ್ನೊಳಗೊಂಡ ತಂಡ ನ್ಯಾಯಾಲಯದ ಕಲಾಪದ ರೀತಿಯಲ್ಲೇ ಕಲಾಪ ನಡೆಸಲಿದ್ದಾರೆ. ಇಲ್ಲಿ 84 ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ಜೊತೆಗೆ ಅಂದು ಬೆಳಗ್ಗೆ ವಕೀಲರ ಸಂಘದಲ್ಲಿ ವಕೀಲರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸೆ. 26 ರಂದು ಉಪ ಲೋಕಾಯುಕ್ತರು ಜಿಲ್ಲೆಯ ವಿವಿಧ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಾರ್ವಜನಿಕರು ಲೋಕಾಯುಕ್ತರಿಗೆ ನೇರವಾಗಿ ದೂರು ನೀಡಲು ಇದು ಮುಕ್ತ ಅವಕಾಶವಾಗಿದೆ. ಹೀಗಾಗಿ ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಅಳವಡಿಕೆ, ಗ್ರಾಪಂ ಮಟ್ಟದಲ್ಲಿಯೂ ಪ್ರಚಾರ, ಎಲ್ಲ ಇಲಾಖೆಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ ಸ್ವಚ್ಛ ವಾಹಿನಿಗಳ ಮೂಲಕವೂ ಜನರಿಗೆ ಉಪ ಲೋಕಾ ಯುಕ್ತರ ಭೇಟಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಎಡಿಸಿ ನಾರಾಯಣ ರಡ್ಡಿ ಕನಕರಡ್ಡಿ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಸುದರ್ಶನ್ ಇದ್ದರು.
------- ಬಾಕ್ಸ್ ------ಸೆ. 22 ರಿಂದ ಸಮೀಕ್ಷೆಜಿಲ್ಲೆಯಲ್ಲಿ ಸೆ. 22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಆರಂಭಿಸಲಾಗುತ್ತಿದೆ. ಜೊತೆಗೆ ಹತ್ತು ದಿನಗಳ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಡಿಸಿ ಮೀನಾ ನಾಗರಾಜ್ ತಿಳಿಸಿದರು.ಸಮೀಕ್ಷೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸಮೀಕ್ಷೆ ವೇಳೆ ಜಾತಿ ಕಾಲಂ ಒಂದು ಭಾಗ ವಾಗಿರುತ್ತದೆಯಷ್ಟೇ ಎಂದು ಹೇಳಿದರು.
ಸಮೀಕ್ಷೆ ವೇಳೆ ಪಡಿತರ ಚೀಟಿ ಇದ್ದವರು ಅದರ ದಾಖಲೆಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ಪಡಿತರ ಚೀಟಿ ಇಲ್ಲದವರು ಆಧಾರ್ ಕಾರ್ಡ್ ಸಿದ್ದವಿಟ್ಟುಕೊಳ್ಳಬೇಕು. ಒಂದು ಕುಟುಂಬದ ಸಮೀಕ್ಷೆ ನಡೆಸಲು ಕನಿಷ್ಟ 20 ನಿಮಿಷ ಬೇಕಾಗಲಿದೆ. 60 ಪ್ರಶ್ನೆಗಳಿದ್ದು, ಪ್ರತಿ ಕುಟುಂಬದವರು ಇಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ. ಬದಲಿಗೆ ಅವರ ಕುಟುಂಬದ ಸ್ಥಿತಿಗತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು. ಹೀಗಾಗಿ ಕನಿಷ್ಟ 40 ರಿಂದ 45 ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದರು.ಈ ಸಮೀಕ್ಷೆಗೆ ಸಂಬಂಧಿಸಿದಂತೆ ಮೆಸ್ಕಾಂನವರು ಪ್ರತಿ ಮನೆಗೆ ತೆರಳಿ ಜಿಲ್ಲೆಯ 3.44 ಲಕ್ಷ ಮನೆಗಳಿಗೆ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸುವ ಮೂಲಕ ಜಿಯೋ ಮ್ಯಾಪಿಂಗ್ ಮಾಡಿದ್ದಾರೆ. ಯಾವ ಮನೆಗೆ ಮೆಸ್ಕಾಂನ ಆರ್.ಆರ್. ನಂಬರ್ ಇಲ್ಲವೋ ಅವರ ಮನೆಗಳಿಗೆ ಆರ್.ಆರ್. ನಂಬರ್ ಇಲ್ಲ ಎಂದು ನಮೂದಿಸಿದ್ದಾರೆ. ಇದಲ್ಲದೆ ಯಾವುದೇ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆಮನೆಗೆ ಅರ್ಜಿ ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಮೀಕ್ಷೆಗೆ ನೆಟ್ವರ್ಕ್ ಸಮಸ್ಯೆ ಇದೆ. ಹೀಗಾಗಿ ಕ್ಯಾಂಪ್ ಗಳನ್ನು ನಡೆಸಿ ಜನರನ್ನು ಅಲ್ಲಿಗೆ ಕರೆತಂದು ಸರ್ಕಾರಿ ಕಟ್ಟಡಗಳಲ್ಲಿಯೇ ಸಮೀಕ್ಷೆ ನಡೆಸುತ್ತೇವೆ. ಜಿಲ್ಲೆಯಲ್ಲಿ 23 ಸಾವಿರ ಕುಟುಂಬಗಳ ಮನೆ ಇರುವಲ್ಲಿ ನೆಟ್ವರ್ಕ್ ಇಲ್ಲ. ಹೀಗಾಗಿ ಇಂತಹ ಕುಟುಂಬಗಳ ಸಮೀಕ್ಷೆ ನಡೆಸಲು ಜಿಲ್ಲೆಯ 73 ಕಡೆ ಕ್ಯಾಂಪ್ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.- 18 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿ ಮೀನಾ ನಾಗರಾಜ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹಾಗೂ ಉಪ ವಿಭಾಗಾಧಿಕಾರಿ ಸುದರ್ಶನ್ ಉಪಸ್ಥಿತರಿದ್ದರು.