14ಕ್ಕೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್

| Published : Sep 06 2024, 01:10 AM IST

ಸಾರಾಂಶ

ಚಾಮರಾಜನಗರದ ನ್ಯಾಯಾಲಯದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್.ಭಾರತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಚಾಮರಾಜನಗರ ಜಿಲ್ಲಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಸೆ.14 ರಂದು ನಡೆಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್.ಭಾರತಿ ತಿಳಿಸಿದರು.ನಗರದ ನ್ಯಾಯಾಲಯದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದ್ದಲ್ಲಿ, ಮುಂಚಿತವಾಗಿ ಚಾಮರಾಜನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಆಯಾಯ ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಆನ್‌ಲೈನ್, ವೀಡಿಯೊ ಕಾನ್ಫರೆನ್ಸ್, ಇ-ಮೇಲ್, ಎಸ್.ಎಂ.ಎಸ್., ವಾಟ್ಸ್ಆಪ್ ಮೂಲಕ ಅಥವಾ ಖುದ್ದಾಗಿ ಹಾಜರಾಗುವ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಿದರು.

ಲೋಕ್ ಅದಾಲತ್ ನಿಮಿತ್ತ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜೀ ಯೋಗ್ಯ ಪ್ರಕರಣಗಳನ್ನು ಶೀಘ್ರ ಹಾಗೂ ಪರಿಣಾಮಕಾರಿಯಾಗಿ ತೀರ್ಮಾನ ಮಾಡಿಕೊಳ್ಳಲು ಎ.ಡಿ.ಆರ್. ಕಟ್ಟಡದಲ್ಲಿ ಪೂರ್ವಭಾವಿ ಸಮಾಲೋಚನಾ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ತಿಳಿಸಿದರು.

ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕ ವೇತನ, ಗ್ರಾಹಕರ ವೇದಿಕೆ, ರಿಯಲ್ ಎಸ್ಟೇಟ್, ಸಾಲ ವಸೂಲಾತಿ, ಚೆಕ್ ಅಮಾನ್ಯ, ಮೋಟಾರ್ ಅಪಘಾತ ಪರಿಹಾರ, ಕಾರ್ಮಿಕ ವಿವಾದಗಳು, ವಿದ್ಯುತ್ ಮತ್ತು ನೀರಿನ ಶುಲ್ಕ, ಭೂ ಸ್ವಾಧೀನ, ವೇತನ ಭತ್ಯೆ ಹಾಗೂ ಪಿಂಚಣಿ, ಸಾರ್ವಜನಿಕ ಉಪಯುಕ್ತತೆ ಸೇವೆ, ರಾಜಿಯೋಗ್ಯ ಸಿವಿಲ್ ಮತ್ತು ಕ್ರಿಮಿನಲ್ ಹಾಗೂ ಇತರೆ ಪ್ರಕರಣಗಳು, ಕುಟುಂಬ ನ್ಯಾಯಾಲಯದ ಪ್ರಕರಣಗಳನ್ನು (ವಿವಾಹ ವಿಚ್ಛೇದನವನ್ನು ಹೊರತುಪಡಿಸಿ) ಜನತಾ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿಯಲಿದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳಾದ ಯಳಂದೂರು, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಗಳಲ್ಲಿ ಲೋಕ್ ಅದಾಲತ್‌ಗೆ ಸಂಬಂಧಿಸಿದಂತೆ ಪ್ರತಿದಿನ ಪೂರ್ವಭಾವಿ ಬೈಠಕ್‌ಗಳು ಭೌತಿಕ ಹಾಗೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯದ ಮಾರ್ಗಸೂಚಿ (ಎಸ್‌ಒಪಿ) ನಿಯಮಗಳಂತೆ ನಡೆಯುತ್ತವೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಪ್ರಕರಣ ನಡೆಯುತ್ತಿರುವ ನ್ಯಾಯಾಲಯಕ್ಕೆ ಪ್ರಕರಣ ರಾಜೀ ಮಾಡಿಕೊಳ್ಳುವ ಕುರಿತು ತಿಳಿಸುವ ಮೂಲಕ ಅಥವಾ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸಹಾಯವಾಣಿ ಸಂಖ್ಯೆ 15100, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ 1800-425-90900, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಾಮರಾಜನಗರ 08226-226022, ತಾಲೂಕು ಕಾನೂನು ಸೇವಾ ಸಮಿತಿಗಳಾದ ಕೊಳ್ಳೇಗಾಲ 08224-256788, ಗುಂಡ್ಲುಪೇಟೆ 08229-223279, ಯಳಂದೂರು 08226-240229 ಇ-ಮೇಲ್ ಜಟsಚಿಛಿhಟಿಚಿgಚಿಡಿ೨೦೨೧@gmಚಿiಟ.ಛಿom ಹಾಗೂ ಪ್ರಾಧಿಕಾರದ ಫೇಸ್ ಬುಕ್ ಖಾತೆ dlsachnagar2021@gmail.com ಸಂಪರ್ಕಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ನಂಜಪ್ಪ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.