ಸಾರಾಂಶ
19 ಕೇಂದ್ರಗಳಲ್ಲಿ 5,938 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ವತಿಯಿಂದ 2024-25 ನೇ ಸಾಲಿನ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿ ವೇತನ ಪರೀಕ್ಷೆಯು ಫೆ.2 ರಂದು ಆಯೋಜಿಸಲಾಗಿದ್ದು ಪರೀಕ್ಷೆಯನ್ನು ಯಾವುದೇ ಗೊಂದಲವಿಲ್ಲದೆ ಪಾರದರ್ಶಕವಾಗಿ ನಡೆಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.ನಗರದ ಡಯಟ್‍ನಲ್ಲಿ ಜಿಲ್ಲೆಯ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ತಾಲೂಕು ನೋಡಲ್ ಅಧಿಕಾರಿಗಳಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5,938 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು 6 ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಚಿತ್ರದುರ್ಗ-4 ಕೇಂದ್ರಗಳಲ್ಲಿ 1,533, ಚಳ್ಳಕೆರೆ-4 ಕೇಂದ್ರಗಳಲ್ಲಿ-1,147, ಹಿರಿಯೂರು-3 ಕೇಂದ್ರಗಳಲ್ಲಿ 884, ಹೊಳಲ್ಕೆರೆ-2 ಕೇಂದ್ರಗಳಲ್ಲಿ 695, ಹೊಸದುರ್ಗ-4 ಕೇಂದ್ರಗಳಲ್ಲಿ 1147, ಮೊಳಕಾಲ್ಮೂರು-2 ಕೇಂದ್ರಗಳಲ್ಲಿ 532 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಫೆಬ್ರವರಿ-2 ಭಾನುವಾರ ಬೆಳಿಗ್ಗೆ 10-30 ರಿಂದ 12.00 ವರೆಗೆ ಮಾನಸಿಕ ಸಾಮಥ್ರ್ಯ ಪರೀಕ್ಷೆ, ಮಧ್ಯಾಹ್ನ 2 ರಿಂದ 3.30 ರವರೆಗೆ ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ ನಡೆಯಲಿದ್ದು ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ 30 ನಿಮಿಷ ಹೆಚ್ಚುವರಿ ಸಮಯವಿರುತ್ತದೆ. ಸಂಬಂಧಿಸಿದ ಪರೀಕ್ಷಾ ಕೇಂದ್ರದ ಅಧೀಕ್ಷಕರು ಅಗತ್ಯ ಸಿದ್ಧತೆ ಮಾಡಿಕೊಂಡು ನಿಯಮಾನುಸಾರ ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಎಲ್.ರೇವಣ್ಣ ಮಾತನಾಡಿ, ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿದ್ದು ಆಯ್ಕೆಯಾದ ವಿದ್ಯಾರ್ಥಿಗಳಿಗೆ 9 ರಿಂದ 12 ನೇ ತರಗತಿವರೆಗೆ ಪ್ರತಿ ತಿಂಗಳು 1000 ರು. ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.ಈ ವೇಳೆ ಹಿರಿಯ ಉಪನ್ಯಾಸಕ ಎಸ್. ಜ್ಞಾನೇಶ್ವರ, ಉಪನ್ಯಾಸಕ ಎಸ್.ಬಸವರಾಜು, ಬಿ.ಆರ್.ಸಿ ಸುರೇಂದ್ರನಾಥ್, ತಿಪ್ಪೇರುದ್ರಪ್ಪ, ಶ್ರೀನಿವಾಸ್, ತಿಪ್ಪೇಸ್ವಾಮಿ, ತಾಲೂಕು ನೋಡಲ್ ಅಧಿಕಾರಿಗಳು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಇದ್ದರು.