68ನೇ ರೈಲ್ವೆ ಸಪ್ತಾಹ ಆಚರಣೆ

| Published : Mar 30 2024, 12:51 AM IST

ಸಾರಾಂಶ

2023-24ನೇ ಸಾಲಿನ ವಿಭಾಗದ ಸಾಧನೆಗಳ ಕುರಿತು ತಿಳಿಸಿದ ಅವರು, ಮೈಸೂರು ವಿಭಾಗವು ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಅಂತರ-ವಿಭಾಗ ರಾಜಭಾಷಾ ಮತ್ತು ಉಳಿಕೆ ವಸ್ತುಗಳ ನಿರ್ವಹಣೆಯಲ್ಲಿನ ಕಾರ್ಯಕ್ಷಮತೆಯಂತಹ ಹಲವು ವಿಭಾಗಗಳಲ್ಲಿ ದಕ್ಷತೆಯ ಫಲಕ ಪಡೆದಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ತನ್ನ 68ನೇ ರೈಲ್ವೆ ಸಪ್ತಾಹದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಾದವಗಿರಿಯ ಚಾಮುಂಡಿ ಆಫೀಸರ್ಸ್ ಕ್ಲಬ್‌ನಲ್ಲಿ ಏರ್ಪಡಿಸಿತ್ತು

ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಮಾತನಾಡಿ, 2023-24ನೇ ಸಾಲಿನ ವಿಭಾಗದ ಸಾಧನೆಗಳ ಕುರಿತು ತಿಳಿಸಿದ ಅವರು, ಮೈಸೂರು ವಿಭಾಗವು ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಅಂತರ-ವಿಭಾಗ ರಾಜಭಾಷಾ ಮತ್ತು ಉಳಿಕೆ ವಸ್ತುಗಳ ನಿರ್ವಹಣೆಯಲ್ಲಿನ ಕಾರ್ಯಕ್ಷಮತೆಯಂತಹ ಹಲವು ವಿಭಾಗಗಳಲ್ಲಿ ದಕ್ಷತೆಯ ಫಲಕ ಪಡೆದಿದೆ ಎಂದರು.

ಇದೇ ವರ್ಷ ಜನವರಿಯಲ್ಲಿ ಹುಬ್ಬಳ್ಳಿಯ ಪ್ರಧಾನ ಕಚೇರಿಯಲ್ಲಿ ನಡೆದ ‘ವಿಶಿಷ್ಟ ರೈಲು ಸೇವಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಮುಖ ನಿಲ್ದಾಣಗಳ ವಿಭಾದದಲ್ಲಿ ಮೈಸೂರು ರೈಲು ನಿಲ್ದಾಣವು ಅತ್ಯುತ್ತಮ ನಿರ್ವಹಣೆಯ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ. ಹಾಗೆಯೇ ಬಾಗೇಶಪುರ ರೈಲು ನಿಲ್ದಾಣವು ಪೂರ್ತಿ ನೈಋತ್ಯ ರೈಲ್ವೆಯಲ್ಲಿಯೇ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಸಣ್ಣ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಎಂದರು.

ಅಲ್ಲದೆ ಜ. 23 ರಂದು ನಡೆದ ವಿಶಿಷ್ಟ ರೈಲು ಸೇವಾ ಪುರಸ್ಕಾರ ಸಮಾರಂಭದಲ್ಲಿ ಮೈಸೂರು ವಿಭಾಗದ ಏಳು ಉದ್ಯೋಗಿಗಳನ್ನು ವಲಯ ಮಟ್ಟದಲ್ಲಿ ಅವರ ಪ್ರತಿಭಾನ್ವಿತ ಸೇವೆಗಾಗಿ ಶ್ಲಾಘಿಸಿ ಪ್ರಶಸ್ತಿ ನೀಡಲಾಯಿತು.

ಈ ವರ್ಷದಲ್ಲಿ 10.503 ಮಿಲಿಯನ್‌ಟನ್‌ಗಳ ಒಟ್ಟಾರೆ ಸಾಗಾಣೆಯೊಂದಿಗೆ ಅತ್ಯಧಿಕ ಸರಕ್ಕಿನ ಸಾಗಣೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ 9.083ರಷ್ಟು ಗಣನೀಯ ಹೆಚ್ಚಳವಾಗಿದ್ದು ಗಮನಾರ್ಹ. (ಇದು ಹಿಂದಿನ 2022-23ರ ಪೂರ್ಣ ಹಣಕಾಸು ವರ್ಷದ ಗರಿಷ್ಠ ಸಾಗಾಣೆಯಾದ 9.549 ಎಂಟಿ ಅನ್ನು ಮೀರಿಸಿದೆ)

ಸರಕು ಸಾಗಣೆ ಆದಾಯ 907.91 ಕೋಟಿ ಆಗಿದ್ದೂ, ಹಿಂದಿನ ವರ್ಷದ ಅತ್ಯಧಿಕ ಗಳಿಕೆಯ ದಾಖಲೆ ಮುರಿದು ಮೀರಿಸಿದೆ. ಹಿಂದಿನ ಪೂರ್ಣ ಆರ್ಥಿಕ ವರ್ಷದ ಅತ್ಯಧಿಕ ಗಳಿಕೆಯ 897.28 ಕೋಟಿಯನ್ನು ಒಂದು ತಿಂಗಳ ಮುಂಚಿತವಾಗಿ ಮೀರಿಸಿದೆ. ಒಟ್ಟಾರೆ ಆದಾಯ ಕೂಡ ಅತ್ಯಧಿಕ 1330.17 ಕೋಟಿಗಳಾಗಿದ್ದೂ, ಹಿಂದಿನ 2022-23ರ ಪೂರ್ಣ ಹಣಕಾಸು ವರ್ಷದ ಗರಿಷ್ಠವಾದ 1304.91 ಕೋಟಿ ರೂ.ಗಳನ್ನು ಕೇವಲ 334 ದಿನಗಳಲ್ಲಿ ಮೀರಿಸಿದೆ.

ಸರಕು ಹಾಗು ಪ್ರಯಾಣಿಕರ ಸಾಗಾಣೆ ಸೇವೆಗಳ ಸುಗಮ ಕಾರ್ಯಾಚರಣೆ ಬಗ್ಗೆ ಖಚಿತಪಡಿಸಿದರು. ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯು ರೈಲ್ವೆ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಅನುಕೂಲಕ್ಕಾಗಿ ಸಾಮಾಜಿಕ ಕಲ್ಯಾಣ ಚಟುವಟಿಕೆ ಉತ್ತೇಜಿಸುವಲ್ಲಿನ ತನ್ನ ಪ್ರಯತ್ನಗಳಿಗಾಗಿ ಗುತುತಿಸಿಕೊಂಡಿದೆ ಎಂದು ಅವರು ಹೇಳಿದರು.

2022-23ರ ಆರ್ಥಿಕ ವರ್ಷದಲ್ಲಿನ ಅಸಾಧಾರಣ ಕಾರ್ಯಕ್ಷಮತೆ ತೋರಿದ ಅತ್ಯುತ್ತಮ ಉದ್ಯೋಗಿಗಳಿಗೆ ಪ್ರಶಸ್ತಿ ನೀಡಿದರು. ಅಂತೆಯೇ ರೈಲ್ವೆಗೆ ಅನುಕರಣೀಯ ಕೊಡುಗೆ ನೀಡಿದ ಒಟ್ಟು 22 ಪರಿಶ್ರಮಿ ಸಿಬ್ಬಂದಿಗೆ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನಾಯಕ್ ನಾಯಕ್, ಇ. ವಿಜಯಾ, ಹಿರಿಯ ವಿಭಾಗೀಯ ಸಿಬ್ಬಂದಿ ವಿಷ್ಣು ಗೌಡ ಸೇರಿ ಅನೇಕರು ಪಾಲ್ಗೊಂಡಿದ್ದರು.