Diwali celebrated with great joy and enthusiasm in various places
-ಶೃಂಗೇರಿ ಶಾರದಾ ಪೀಠದಲ್ಲಿ ಗೋಪೂಜೆ, ಶಾರದಾಂಬೆ, ಚಂದ್ರಮೌಳೀಶ್ವರ ಸ್ವಾಮಿಗೆ ಪೂಜೆ । ವಿಧುಶೇಖರ ಭಾರತೀ ತೀರ್ಥರಿಂದ ವಿಶೇಷ ಪೂಜೆಕನ್ನಡಪ್ರಭ ವಾರ್ತೆ ಶೃಂಗೇರಿ
ತಾಲೂಕಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ,, ಸಡಗರದಿಂದ ಆಚರಿಸಲಾಯಿತು.ಭಾನುವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ಹಬ್ಬ ನಡೆಯಲಿದ್ದು, ಮೊದಲ ದಿನ ಭಾನುವಾರ ನರಕ ಚತುರ್ದಶಿ, ಲಕ್ಷ್ಮೀ ಪೂಜೆ, ಸಹಿತ ಹಬ್ಬದ ಸಂಭ್ರಮಾಚರಣೆ ಕಂಡು ಬಂದಿತು.ಎರಡನೆಯ ದಿನವಾದ ಸೋಮವಾರ ತಾಲೂಕಿನೆಲ್ಲೆಡೆ ಹಬ್ಬದ ಸಂಭ್ರಮ ಕಂಡುಬಂದಿತು. ಪ್ರತಿವರ್ಷ ದೀಪಾವಳಿಯೊಂದಿಗೆ ಮಳೆಯ ಹಾವಳಿಯು ಆರಂಭವಾಗುತ್ತಿತ್ತು.
ಪಟಾಕಿ ಪ್ರಿಯರಲ್ಲಿ ನಿರಾಶೆ ಮೂಡಿಸುತ್ತಿತ್ತು. ಆದರೆ, ಈ ವರ್ಷ ಮಳೆಯಿಲ್ಲದ ಕಾರಣ ಪಟಾಕಿ ಪ್ರಿಯರಲ್ಲಿ, ಮಾರಾಟಗಾರರಲ್ಲಿ ಸಂತಸದ ಉತ್ಸಾಹ ಕಂಡುಬರುತ್ತಿದ್ದು, ಪಟಾಕಿ ಮಾರಾಟ ಮಳಿಗೆಗಳಲ್ಲಿ ಮಾರಾಟ ಜೋರಾಗಿದ್ಜು, ತಾಲೂಕಿನೆಲ್ಲೆಡೆ ಪಟಾಕಿ ಸದ್ದುಗಳು ಮೊಳಗುತ್ತಿವೆ.ಶ್ರೀಶಾರದಾ ಪೀಠದಲ್ಲಿ ಗೋಪೂಜೆ:ಶ್ರೀಶಾರದಾ ಪೀಠದಲ್ಲಿ ಸಂಪ್ರದಾಯದಂತೆ ಈ ವರ್ಷವೂ ದೀಪಾವಳಿ ಕಳೆಗಟ್ಟಿತ್ತು. ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ, ಶ್ರೀ ಶಾರದಾಂಬಾ ದೇವಾಲಯ ಸಹಿತ ಶ್ರೀಮಠದ ಆವರಣದಲ್ಲಿರುವ ದೇವಾಲಯಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಶ್ರೀ ವಿಧುಶೇಖರ ಭಾರತೀ ತೀರ್ಥರು ದೇವಾಲಯಗಳಿಗೆ ತೆರಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಬೆಳಿಗ್ಗೆ ಶ್ರೀ ಮಠದ ನರಸಿಂಹವನದಲ್ಲಿನ ಗೋಶಾಲೆಯಲ್ಲಿನ ಎಲ್ಲಾ ಹಸುಗಳಿಗೆ, ಕರುಗಳಿಗೆ ಸ್ನಾನ ಮಾಡಿಸಿ ಮೈಮೇಲೆ ಬಣ್ಣದ ಚಿತ್ತಾರಗಳನ್ನು ಮೂಡಿಸಿ ರೇಷ್ಮೆ ಹೊದಿಕೆ ಹಾಕಿ ಹೂಹಾರ ಹಾಕಿ ಸಿಂಗರಿಸಲಾಗಿತ್ತು.ಶ್ರೀಮಠದ ಸಂಪ್ರದಾಯದಂತೆ ವಾದ್ಯ ಮೇಳ, ಛತ್ರಿ ಚಾಮರ, ವೇದಘೋಷಗಳೊಂದಿಗೆ ಬಂದ ಶ್ರೀವಿಧುಶೇಖರ ಭಾರತೀ ತೀರ್ಥರು ಗೋವುಗಳಿಗೆ ವಿಶೇಷ ಪೂಜೆ ನೆರವೇರಿಸಿ ಗೋವುಗಳಿಗೆ ತಿಂಡಿ ತಿನ್ನಿಸಿದರು. ಆನೆಗಳಿಗೂ ಪೂಜೆ ನೆರವೇರಿಸಿದರು.ತಾಲೂಕಿನ ಪಟ್ಟಣ ಸೇರಿದಂತೆ ಕಸಬಾ ಹೋಬಳಿಯ ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೂ ದೀಪಾವಳಿ ಸಂಭ್ರಮ ಕಂಡುಬಂದಿತು. ಬೆಳಿಗ್ಗೆಯಿಂದ ಗೋಪೂಜೆ ನಡೆಯಿತು. ಜಾನುವಾರುಗಳಿಗೆ ಸ್ನಾನ ಮಾಡಿಸಿ ಮೈಮೇಲೆ ಕೆಮ್ಮಣ್ಣು, ಜೇಡಿ ಬೊಟ್ಟು ಹಾಕಿ, ಸ್ವಚ್ಛಗೊಳಿಸಿದ ಕೊಟ್ಟಿಗೆಯಲ್ಲಿ, ಮನೆಯಂಗಳಗಳಲ್ಲಿ ಜಾನುವಾರುಗಳನ್ನು ಕಟ್ಟಿ ಹೂಮಾಲೆಗಳನ್ನು ತೊಡಿಸಿ ಗೋಪೂಜೆ ನೆರವೇರಿಸಿದರು.
ವಾಹನಗಳನ್ನು ಶುಭ್ರಗೊಳಿಸಿ ಪೂಜೆ ನೆರವೇರಿಸಲಾಯಿತು. ಕೆಲವು ದೇವಾಲಯಗಳ ಮುಂದೆ ವಾಹನಗಳನ್ನು ನಿಲ್ಲಿಸಿ ವಾಹನಗಳಿಗೆ ಆಯುಧ ಪೂಜೆ ನೆರವೇರಿಸಿದರು.ಲಕ್ಷ್ಮಿ ಪೂಜೆ, ಹೊಲಗದ್ದೆಗಳಿಗೆ ಪೂಜೆ ಅಂಗಡಿ, ಹೋಟೇಲುಗಳನ್ನು ಶುಭ್ರಗೊಳಿಸಿ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ವಿಶೇಷ ಪೂಜೆ, ಮಂಗಳಾರತಿ ಮೊಳಗುವುದರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ವಿತರಣೆ ಮಾಡಲಾಯಿತು. ಹೊಲಗದ್ದೆಗಳಿಗೆ ದೀಪ ಬೆಳಗಿಸಿ ದೀಪಾವಳಿ ಘೋಷಣೆ ಮಾಡಿ ಆಚರಿಸಲಾಯಿತು.ಶೃಂಗೇರಿ ಪಟ್ಟಣದಲ್ಲಿ ಭಾನುವಾರ ಸಂಜೆ ಅಂಗಡಿ, ಹೊಟೇಲುಗಳಲ್ಲಿ ಪೂಜೆ ನಡೆದು, ಸೋಮವಾರ ಬೆಳಿಗ್ಗೆಯೂ ಕೆಲವೆಡೆ ಪೂಜೆ ನಡೆಯಿತು. ಮನೆಗಳ ಮುಂದೆ ಸಾಲು ಸಾಲು ಹಣತೆಗಳನ್ನು ಬೆಳಗಿಸಿ ದೀಪಾವಳಿ ಕಳೆಗಟ್ಟಿಸುವಂತೆ ಮಾಡಿದೆ.
ಮನೆಮನೆಗಳಲ್ಲಿ ಸಂಭ್ರಮ:ತಾಲೂಕಿನ ಮನೆ ಮನೆಗಳಲ್ಲಿ ಸಂಪ್ರದಾಯಂತೆ ದೀಪಾವಳಿಯ ವಿಶೇಷ ಪೂಜೆ, ಸಿಹಿ ತಿಂಡಿ ತಯಾರಿಸಿ, ಹಬ್ಬದೂಟಗಳನ್ನು ಮಾಡುವುದರ ಮೂಲಕ ಮನೆ ಮಂದಿಯೆಲ್ಲ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಿಂದ ಆಚರಿಸಿದರು.ಮಂಗಳವಾರ ಕಿಗ್ಗಾ ಹೋಬಳಿ ವ್ಯಾಪ್ತಿ ಪ್ರದೇಶಗಳಲ್ಲಿ ಬಲಿಪಾಡ್ಯಮಿ, ಗೋಪೂಜೆ, ಲಕ್ಷ್ಮಿಮಿ ಪೂಜೆ, ಹಬ್ಬದ ಸಂಭ್ರಮ ನಡೆಯಲಿದೆ.ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ ಬೆಳಿಗ್ಗೆ ಗೋಪೂಜೆ ನಡೆಯಲಿದೆ.
---------ಫೋಟೋಶೃಂಗೇರಿ ಶ್ರೀ ಮಠದ ನರಸಿಂಹವನದಲ್ಲಿ ಸೋಮವಾರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿಗಳು ಗೋಪೂಜೆ, ಗಜಾಶ್ವಪೂಜೆ ನೆರವೇರಿಸಿದರು.